Advertisement

ಶತಮಾನದ ಶಾಲೆ ಸಾಗುತ್ತಿದೆ ಅವಸಾನದತ್ತ!

03:00 PM Jun 13, 2019 | Naveen |

ಸಿಕಂದರ ಎಂ. ಆರಿ
ನರೇಗಲ್ಲ:
ನೂರು ವರ್ಷದ ಇತಿಹಾಸವಿರುವ, ಹಲವಾರು ದಾಖಲೆ ಹೊಂದಿರುವ ಶಾಲೆಯೊಂದು ಅಭಿವೃದ್ಧಿ ಕಾಣದೆ ಸೊರಗುತ್ತಿದೆ.

Advertisement

ಈ ನಾಡಿಗೆ ಅನೇಕ ಪ್ರತಿಭಾನ್ವಿತರನ್ನು, ಸಾಧಕರನ್ನು, ಅಪ್ರತಿಮ ಕ್ರೀಡಾಪಟುಗಳನ್ನು, ನಾಡು ಕಂಡ ಅಪರೂಪದ ಸಾಹಿತಿಗಳನ್ನು ಸಿದ್ಧಪಡಿಸಿ ಕಳುಹಿಸಿದ ಇತಿಹಾಸ ಹೊಂದಿರುವ ಅಬ್ಬಿಗೇರಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಕಟ್ಟಡ ಶಿಥಿಲಗೊಂಡು, ಗೋಡೆಗಳು ಬಿರುಕು ಬಿಟ್ಟು ಅಗತ್ಯ ಮೂಲ ಸೌಲಭ್ಯಗಳ ಕೊರತೆಯಿಂದ ಅವಸಾನದತ್ತ ಸಾಗಿದೆ.

ಶಾಲೆಯ ಚಾವಣಿ, ಕಿಟಕಿ, ಬಾಗಿಲುಗಳು ಚಿಂದಿಯಾಗಿ ಶೋಚನೀಯ ಸ್ಥಿತಿಯಲ್ಲಿದೆ. ಶತಮಾನ ಸಂಭ್ರಮದಲ್ಲಿರಬೇಕಾದ ಶಾಲೆಯ ಈ ಸ್ಥಿತಿಗೆ ಶಿಕ್ಷಣ ಇಲಾಖೆ ಅಲಕ್ಷ್ಯ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾರಣ. ಶಾಲೆ ಸಂಕಷ್ಟದ ಬಗ್ಗೆ ಸಂಬಂಧಿಸಿದವರಿಗೆ ಏನೂ ತಿಳಿದಿಲ್ಲ. ಆದರೆ ಎಲ್ಲ ಗೊತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬುದು ಪಾಲಕರ ಅಳಲು.

ಮಳೆಗಾಲದಲ್ಲಿ ಸೋರುವಿಕೆ
ಈ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಕಟ್ಟಡಗಳ ಮೇಲ್ಛಾವಣಿ ಹಂಚುಗಳು ಯಾವ ಕ್ಷಣದಲ್ಲಾದರೂ ನೆಲಕಚ್ಚುವ ಹಂತದಲ್ಲಿವೆ. ಶಾಲೆಯ ಕೊಠಡಿಗಳ ಸಂಖ್ಯೆ 22, ಅದರಲ್ಲಿ 19 ಕೊಠಡಿಗಳು ಶತಮಾನ ಕಂಡಿವೆ. ಕೋಣೆ ಮಳೆಗಾಲದಲ್ಲಿ ಸೋರುವುದು ಹಾಗೂ ಸೂರ್ಯನ ಕಿರಣ ಕೊಠಡಿ ಒಳಗೆ ಪ್ರವೇಶ ಮಾಡುತ್ತಿವೆ. 1ರಿಂದ 7 ತರಗತಿಯಲ್ಲಿ ಒಟ್ಟು 320 ವಿದ್ಯಾರ್ಥಿಗಳು ಇದ್ದಾರೆ. ಶಾಲೆಯಲ್ಲಿ ಒಟ್ಟು 11 ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ಮುಖ್ಯಶಿಕ್ಷಕ, ಒಬ್ಬ ದೈಹಿಕ ಶಿಕ್ಷಕರನ್ನು ಬಿಟ್ಟು 9 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಣಿತ ಹಾಗೂ ವಿಜ್ಞಾನ ಶಿಕ್ಷಕರ ಹುದ್ದೆ ಕಳೆದ 8 ವರ್ಷಗಳಿಂದ ಖಾಲಿ ಇದೆ.

ಸ್ಥಳೀಯ ಎಸ್‌ಡಿಎಂಸಿ ಕಮಿಟಿ ಸದಸ್ಯರಿಗೆ, ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮೌಖೀಕ ಹಾಗೂ ಲಿಖೀತವಾಗಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಎನ್ನುತ್ತಾರೆ ಪಾಲಕರು.

Advertisement

ತುಂತುರು ಮಳೆ, ಬಿಸಿಲು ಬಂದರೂ ಕಷ್ಟ
ಮಳೆ, ಬಿಸಿಲನ್ನು ತಡೆಗಟ್ಟುವ ಶಕ್ತಿ ಶಾಲೆ ಛಾವಣಿಗಿಲ್ಲ. ಹಾಳಾದ ಹಂಚು, ಮುರಿದು ಹೋದ ಬಾಗಿಲು, ಒಡೆದು ಕಿಟಕಿ, ತುಂತುರು ಮಳೆ ಬಂದರೂ ಸೋರುವ ಸೂರು, ಸುಣ್ಣ-ಬಣ್ಣ ಕಾಣದ ಗೋಡೆಗಳು, ಶಿಥಿಲಗೊಂಡ ಕಟ್ಟಡಗಳು ವಿದ್ಯಾರ್ಥಿಗಳಿಗೆ ಜೀವ ಭಯದ ವಾತಾವರಣ ಮೂಡಿಸುತ್ತಿವೆ. ಇಷ್ಟಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಕಣ್ತೆರೆದು ನೋಡುದಿರುವುದು ವಿಪರ್ಯಾಸವೇ ಸರಿ.

ಗೋಡೆಗಳಲ್ಲಿ ಬಿರುಕು, ಸುರಕ್ಷತೆಯಿಲ್ಲದ ಮುರಿದ ಬಾಗಿಲುಗಳು, ಕುಸಿದು ಬೀಳುವ ಸ್ಥಿತಿಯಲ್ಲಿರುವ ಚಾವಣಿ, ಸಿಮೆಂಟ್ ಇಲ್ಲದ ನೆಲ, ನೂರಾರು ವರ್ಷಗಳಿಂದ ಮಳೆ, ಬಿಸಿಲು ಲೆಕ್ಕಿಸದೇ ಆಯುಷ್ಯ ಮುಗಿದು ಮತ್ತು ಪುಂಡಪೋಕರಿಗಳ ಕಲ್ಲು ಹೊಡೆತಕ್ಕೆ ಪುಡಿಪುಡಿಯಾಗಿರುವ ಹಂಚುಗಳು ಕಣ್ಣಿಗೆ ರಾಚುತ್ತಿವೆ. ಇನ್ನಾದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ಶತಮಾನದ ಶಾಲೆಯನ್ನು ಸುಸ್ಥಿತಿಗೆ ತರುವ ಪ್ರಾಮಾಣಿಕ ಕಾರ್ಯ ನಡೆಸಲಿ.
ಶರಣಪ್ಪ ಗುಜಮಾಗಡಿ,
ಮಾಜಿ ಅಧ್ಯಕ್ಷ ಎಸ್‌ಡಿಎಂಸಿ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾವುದೇ ಅನುದಾನ ಇಲ್ಲ. ಸಂಸದರ, ಶಾಸಕರ, ಜಿಪಂ, ತಾಪಂ, ಅನುದಾನಗಳು ಬರುವ ನೀರಿಕ್ಷೆಯಲ್ಲಿದ್ದೇವೆ. ಈಗಾಗಲೆ ಕ್ರಿಯಾಯೋಜನೆ ಮಾಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿದರೆ ಕೂಡಲೇ ರಿಪೇರಿ ಮಾಡುವ ಕಾರ್ಯ ಪ್ರಾರಂಭಿಸಲಾಗುವುದು.
•ಎನ್‌. ನಂಜುಡಯ್ಯ,
ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next