ನರೇಗಲ್ಲ: ಅಬ್ಬಿಗೇರಿ ಗ್ರಾಮದ ವಾರ್ಡ್ ನಂ.4ರ ಹಡಗಲಿ ದಾರಿಯಲ್ಲಿರುವ ಪ್ಲಾಟ್‌ನಲ್ಲಿ ನೂರಾರು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಸೌಲಭ್ಯ ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದು ಮಾಲಿಕರ ಜಮೀನುವಾಗಿದ್ದು, ಇಲ್ಲಿ ಮೂಲ ಸೌಲಭ್ಯ ಒದಗಿಸಲು ಗ್ರಾಪಂ ಹಿಂದೇಟು ಹಾಕುತ್ತಿದೆ. ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು ಎನ್ನುವಂತಿದೆ ಇಲ್ಲಿನ ನಿವಾಸಿಗಳ ಸ್ಥಿತಿ.
Advertisement
ಸುಸಜ್ಜಿತ ರಸ್ತೆ, ಚರಂಡಿ, ಸಾಮೂಹಿಕ ಶೌಚಾಲಯ, ಅಂಗನವಾಡಿ, ಅಷ್ಟೇ ಏಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೇ ಇಲ್ಲಿಯ ಜನರು ವಾಸಿಸುತ್ತಿದ್ದಾರೆ. ಇಲ್ಲಿ ಸುಸಜ್ಜಿತ ಚರಂಡಿ ಇಲ್ಲ. ಹೀಗಾಗಿ ನಿವಾಸಿಗಳು ಉಪಯೋಗಿಸಿದ ಕೊಳಚೆ ನೀರು ನೇರವಾಗಿ ಜನರು ಓಡಾಡುವ ರಸ್ತೆ ಮೇಲೆಯೇ ಹರಿಯುತ್ತದೆ. ಜನತೆ ಕೊಳಚೆ ನೀರನ್ನು ತುಳಿದುಕೊಂಡೇ ಓಡಾಡಬೇಕಾದ ಅನಿವಾರ್ಯತೆ ಇದೆ. ಇದರ ಪರಿಣಾಮ ಜನ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಜತೆಗೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ.