ಗದಗ: ಎಲ್ಲೆಡೆ ಕೋವಿಡ್ 19 ಭಯ ಆವರಿಸಿದ್ದರಿಂದ ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿದ್ದ ವಿವಿಧ ಕಾಮಗಾರಿಗಳು ಕೆಲ ದಿನಗಳ ಕಾಲ ಸ್ಥಗಿತಗೊಂಡಿದ್ದವು. ಆದರೆ ಇತ್ತೀಚೆಗೆ ಗ್ರಾಮೀಣ ಜನರಲ್ಲೂ ಈ ಕುರಿತು ಜಾಗೃತಿ ಮೂಡಿಸಿದ್ದರಿಂದಾಗಿ ಒಂದು ವಾರದಿಂದ ಉದ್ಯೋಗ ಖಾತ್ರಿ ಕಾಮಗಾರಿಗಳು ಚುರುಕು ಪಡೆಯುತ್ತಿವೆ.
ಬಯಲು ಸೀಮೆ ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿ ಕೋವಿಡ್ 19 ಭೀತಿ ಆವರಿಸಿದ್ದರಿಂದ ಉದ್ಯೋಗ ಖಾತ್ರಿ ಕಾಮಗಾರಿಗಳಿಗೆ ತಡೆಯಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರಕಾರ ಪ್ರಕಟಿಸಿರುವ ಪರಿಷ್ಕೃತ ಮಾರ್ಗಸೂಚಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಶಕ್ತಿ ತುಂಬಿದೆ. ಕೋವಿಡ್ 19 ಭಯದಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಆರ್ಥಿಕ ಸಮಸ್ಯೆ ಎದುರಾಗಿತ್ತು. ಆದರೆ ಸರಕಾರದ ಹೊಸ ಮಾರ್ಗ ಸೂಚಿ ಗ್ರಾಮೀಣ ಜನರಲ್ಲಿ ಹೊಸ ಚೈತನ್ಯ ಮೂಡಿಸಿದೆ.
ಮಾನವ ಕೆಲಸಗಳಿಗೆ ಒತ್ತು: ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಒದಗಿಸುವಂತೆ ಏಪ್ರಿಲ್-ಮೇ ತಿಂಗಳಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ. ಈ ಬಾರಿ ಕೋವಿಡ್ 19 ಭೀತಿಯಿಂದಾಗಿ ಉದ್ಯೋಗ ಖಾತ್ರಿ ಯೋಜನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು. ಆದರೆ ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯಂತೆ ಕಾಮಗಾರಿ ಕೈಗೊಳ್ಳುತ್ತಿದ್ದು, ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ವಾರದಿಂದ ನರೇಗಾ ಅಡಿ ಉದ್ಯೋಗಕ್ಕಾಗಿ ಬೇಡಿಕೆ ಹೆಚ್ಚುತ್ತಿದೆ. ಹೌಸಿಂಗ್, ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ, ಹಳ್ಳಗಳ ಹೂಳೆತ್ತುವುದು, ಶಾಲಾ ಕಾಂಪೌಂಡ್ ನಿರ್ಮಾಣ, ಅರಣ್ಯೀಕರಣ, ರಸ್ತೆ ಬದಿ ಸಸಿ ನೆಡುವಿಕೆ, ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ.
ವೈಯಕ್ತಿಕ ಕೆಲಸಕ್ಕೆ ಆದ್ಯತೆ: ಆ ಪೈಕಿ ಜಿಲ್ಲೆಯಲ್ಲಿ ಸದ್ಯ 103 ಸಮುದಾಯ ಕಾಮಗಾರಿಗಳು, 961 ವೈಯಕ್ತಿಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರತಿನಿತ್ಯ 4,446 ಕಾರ್ಮಿಕರಿಗೆ ಕೂಲಿ ಒದಗಿಸಲಾಗುತ್ತಿದೆ. ಕೋವಿಡ್ 19 ಹರಡದಂತೆ ವೈಯಕ್ತಿಕ ಕೆಲಸಕ್ಕೆ ಒತ್ತು ನೀಡಿದ್ದು, ಸಮುದಾಯಿಕ ಕಾಮಗಾರಿಗಳಲ್ಲಿ ಕಾರ್ಮಿಕರನ್ನು ದೂರ ದೂರ ನೇಮಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಒಟ್ಟಾರೆ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಹೈರಾಣಾಗಿದ್ದ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
–ವೀರೇಂದ್ರ ನಾಗಲದಿನ್ನಿ