ಬಾಗಲಕೋಟೆ: ಕೋವಿಡ್ 19 ವೈರಸ್ ನಿಯಂತ್ರಣಕ್ಕಾಗಿ ಎಲ್ಲೆಡೆ ಲಾಕ್‌ಡೌನ್ ಮುಂದುವರಿದಿದ್ದು, ನಿತ್ಯ ದುಡಿದು ಜೀವನ ನಡೆಸುವವರ ಬದುಕು ಕಷ್ಟಕರವಾಗಿದೆ. ಆದರೆ, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಂಕಷ್ಟದ ಕಾಲದಲ್ಲೂ ಕೈಹಿಡಿದಿದೆ.
ಹೌದು, ಜಿಲ್ಲೆಯಲ್ಲಿ ಒಟ್ಟು 198 ಗ್ರಾ.ಪಂ.ಗಳಿದ್ದು, 602 ಕಂದಾಯ (15 ನಗರ ಸ್ಥಳೀಯ ಸಂಸ್ಥೆಗಳು ಹೊರತುಪಡಿಸಿ) ಗ್ರಾಮಗಳಿವೆ. ಅಲ್ಲದೇ 1007 ಜನವಸತಿಗಳಿವೆ. ಅಷ್ಟೂ ಗ್ರಾಮಗಳ ಕೂಲಿ ಕಾರ್ಮಿಕರ ಕೈಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಜಿಪಂನಿಂದ ಹಲವು ಜಾಗೃತಿ, ಕೋವಿಡ್ 19 ವಿಷಯದಲ್ಲಿ ಮುಂಜಾಗ್ರತೆ ಕೈಗೊಂಡಿದ್ದು, ದುಡಿಯುವ ಕೈಗೆ ಉದ್ಯೋಗ ಖಾತ್ರಿ ಸದ್ಯಕ್ಕೆ ಆಸರೆಯಾಗಿದೆ.
875 ಕಾಮಗಾರಿ: ಜಿಲ್ಲೆಯ ಆರು ತಾಲೂಕು (ಹೊಸ ತಾಲೂಕು ಸಹಿತ) 198 ಗ್ರಾಪಂ ವ್ಯಾಪ್ತಿಯಲ್ಲೂ ಉದ್ಯೋಗ ಖಾತ್ರಿ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ನಿರ್ದೇಶನ ನೀಡಿದ್ದು, ಜಿಲ್ಲೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿಯೇ ಇರುವ ಕಾರ್ಮಿಕರು, ಬೇರೆಡೆ ವಲಸೆ ಹೋಗಿದ್ದ ಕಾರ್ಮಿಕರೂ ಸದ್ಯ ಜಿಲ್ಲೆಗೆ ಬಂದಿದ್ದಾರೆ. ಬೇರೆಡೆ ಹೋಗಿದ್ದ ಸುಮಾರು 21 ಸಾವಿರ ವಲಸಿಗರು ಮರಳಿ ಜಿಲ್ಲೆಗೆ ಬಂದಿದ್ದು, ಅವರನ್ನು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಆಯಾ ಗ್ರಾಮವಾರು ಕಾರ್ಮಿಕರಿಗೆ ಉದ್ಯೋಗ ನೀಡಲು ಏ. 1ರಿಂದ ಈವರೆಗೆ ಒಟ್ಟು 875 ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದು, ನಿತ್ಯವೂ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾರೆ.
6 ಸಾವಿರ ಕೂಲಿಕಾರರು: ಜಿಲ್ಲೆಯಲ್ಲಿ ಸದ್ಯ 6518 ಜನ ಕೂಲಿ ಕಾರ್ಮಿಕರು ನಿತ್ಯ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆ ಪ್ರತಿ ವಾರಕ್ಕೊಮ್ಮೆ ಅವರ ಬ್ಯಾಂಕ್ ಖಾತೆಗೆ ಕೂಲಿ ಹಣ ಪಾವತಿ ಮಾಡುವ ಕಾರ್ಯವೂ ನಡೆಯುತ್ತಿದ್ದು, ಕೆಲವು ಅನಿವಾರ್ಯ ಸಂದರ್ಭದಲ್ಲಿ ಮಾತ್ರ 2-3ದಿನ ವಿಳಂಬವಾಗುತ್ತಿದೆ. ಆದರೆ, ಲಾಕ್‌ಡೌನ್‌ದಿಂದ ಎಲ್ಲಿಯೂ ಕೆಲಸವಿಲ್ಲದೇ, ಮುಂದಿನ ಜೀವನ ಹೇಗೆ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಲಿ ಸಿಕ್ಕಿರುವುದು ಕೂಲಿಕಾರರ ಬದುಕಿಗೆ ಆಸರೆಯಾಗಿದೆ. ಇಂದಲ್ಲ ನಾಳೆ ವೇತನ ಬರುತ್ತದೆ. ಸದ್ಯ ಸಾವಿರಾರು ಜನರು ಕೆಲಸವಿಲ್ಲದೇ ಮನೆಯಲ್ಲೇ ಇದ್ದಾರೆ. ನಮಗೆ ದುಡಿಯಲು ಕೆಲಸ ಸಿಕ್ಕ ನೆಮ್ಮದಿ ಇದೆ ಎಂದು ಬಾದಾಮಿ ತಾಲೂಕಿನ ಯಂಕಂಚಿ-ಮಣಿನಾಗರ ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಸುಶೀಲಾ ಮೇಟಿ ಹೇಳಿದರು.
20 ದಿನದಲ್ಲಿ 31 ಸಾವಿರ ಮಾನವ ದಿನ: ಜಿಲ್ಲೆಯಲ್ಲಿ ಏ.1ರಿಂದ ಈವರೆಗೆ ಒಟ್ಟು 31,972 ಮಾನವ ದಿನಗಳ ಸೃಜನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಮಾನವ ದಿನಗಳ ಸೃಜನೆ ಹೆಚ್ಚಾಗಿದೆ. ಅಲ್ಲದೇ ಉದ್ಯೋಗಕೇಳಿ ಬರುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಗ್ರಾ.ಪಂ. ಪಿಡಿಒಯೊಬ್ಬರು ತಿಳಿಸಿದ್ದಾರೆ. ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮುದಾಯ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಜತೆಗೆ ರೈತರು, ತೋಟಗಾರಿಕೆ, ಕೃಷಿ ಇಲಾಖೆಯಡಿ ತಮ್ಮ ಹೊಲದಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಈ ಕುರಿತು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಯಾವ ಕಾಮಗಾರಿ ಕೈಗೊಳ್ಳಲು ಉದ್ಯೋಗ ಖಾತ್ರಿಯಡಿ ಅವಕಾಶವಿದೆ ಎಂಬ ಪ್ರಚಾರವೂ ಮಾಡಿದ್ದು, ಜನರು ಕಾಮಗಾರಿ ಕೈಗೊಳ್ಳಲು ಮುಂದೆ ಬರುತ್ತಿದ್ದಾರೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಉದಯವಾಣಿಗೆ ತಿಳಿಸಿದ್ದಾರೆ.
ಜಿಲ್ಲೆಯ 198 ಗ್ರಾಪಂ. ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ 6518 ಜನ ಕೂಲಿ ಕಾರ್ಮಿಕರಿಗೂ ತಲಾ ಎರಡು ಉಚಿತ ಮಾಸ್ಕ್ ನೀಡಲಾಗಿದೆ. ಅಲ್ಲದೇ ಸ್ಯಾನಿಟೈಜರ್ ಕೂಡ, ಕಾಮಗಾರಿ ನಡೆದ ಸ್ಥಳದಲ್ಲಿಟ್ಟಿದ್ದು, ಕೆಲಸ ಆರಂಭಕ್ಕೂ ಮುಂಚೆ, ಮನೆಗೆ ಹೋಗುವ ವೇಳೆ, ಸ್ಯಾನಿಟೈಜರ್ ನಿಂದ ಕೈ ತೊಳೆದು, ಮನೆಗೆ ಹೋಗುತ್ತಾರೆ. ಅವರ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಎಲ್ಲ ರೀತಿಯ ಮುಂಜಾಗ್ರತೆ ಕೈಗೊಳ್ಳಲಾಗಿದೆ.
– ಗಂಗೂಬಾಯಿ ಮಾನಕರ, ಜಿ.ಪಂ. ಸಿಇಒ
-ಶ್ರೀಶೈಲ ಕೆ. ಬಿರಾದಾರ