Advertisement

ವಲಸಿಗರ ಕೈಹಿಡಿದ ನರೇಗಾ

04:25 PM Oct 30, 2020 | Suhan S |

ಮಂಡ್ಯ: ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಜನರನ್ನು ಮಹಾತ್ಮ ಗಾಂಧೀಜಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿದಿದೆ. ಗ್ರಾಮೀಣ ಜನರು ಹಾಗೂ ವಲಸಿಗರಿಗೆ ಉದ್ಯೋಗ ನೀಡುವ ಮೂಲಕ ಒಂದು ವರ್ಷದ ಸಾಧನೆಯನ್ನು ಆರೇ ತಿಂಗಳಲ್ಲಿ ಮಂಡ್ಯ ಜಿಪಂ ಪೂರೈಸಿದೆ.

Advertisement

ಕೋವಿಡ್ ಸೋಂಕಿನಿಂದ ಮಾರ್ಚ್‌25ರಿಂದ ಲಾಕ್‌ಡೌನ್‌ ಹೇರಲಾಗಿತ್ತು.  ಇದರಿಂದ ಗ್ರಾಮೀಣ ಜನರು ಸೇರಿದಂತೆ ನಗರಗಳಲ್ಲಿ ವಾಸಿಸುತ್ತಿದ್ದ ವಲಸಿಗರು ಸಂಕಷ್ಟಕ್ಕೀಡಾಗಿದ್ದರು. ಕೋವಿಡ್ ದಿಂದ ಜೀವನಕ್ಕಾಗಿ ಹೊರ ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗಿದ್ದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ತಮ್ಮ ಗ್ರಾಮ ಸೇರಿದಂತೆ ನಗರ, ಪಟ್ಟಣಗಳತ್ತ ಮರಳಿ ಬಂದಿದ್ದರು. ಆದರೆ, ಗ್ರಾಮೀಣ ಭಾಗದಲ್ಲಿ ಕೊರೊನಾದಿಂದ ಯಾವುದೇ ಉದ್ಯೋಗವಿಲ್ಲದೆ ಸಂಕಷ್ಟ ಅನುಭವಿಸಿದ್ದರು. ಆಗ ಜಿಪಂನಿಂದ ನರೇಗಾ ಯೋಜನೆಯಡಿ ಉದ್ಯೋಗ ಜನರ ಕೈಹಿಡಿದಿದೆ.

11314 ಉದ್ಯೋಗ ಕಾರ್ಡ್‌ ವಿತರಣೆ: ಜಿಲ್ಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ 11314 ಜನರಿಗೆ ಉದ್ಯೋಗ ಕಾರ್ಡ್‌ ನೀಡಲಾಗಿದೆ. ಸುಮಾರು 29327 ಮಂದಿ ನೋಂದಣಿ ಮಾಡಲಾಗಿದೆ. ಹಾಕಿದ ಅರ್ಜಿಗಳನ್ನು ಪರಿಶೀಲನೆ ನಡೆಸಿ, ಅರ್ಹರಿಗೆ ಉದ್ಯೋಗ ಕಾರ್ಡ್‌ ವಿತರಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 2,92,598 ಮಂದಿಗೆ ಉದ್ಯೋಗ ಕಾರ್ಡ್‌ ನೀಡಲಾಗಿದೆ.

82117 ಕುಟುಂಬಗಳಿಗೆ ಉದ್ಯೋಗ: ಜಿಲ್ಲೆಯಲ್ಲಿ ಸುಮಾರು 1,43,646 ಜನಸಂಖ್ಯೆಗೆ ಅನುಗುಣವಾಗಿ 82117 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಇದರಲ್ಲಿ 25,21,373 ಮಾನವ ಸೃಜಿಸಿದ ದಿನಗಳಾಗಿವೆ. 320 ಕುಟುಂಬಗಳು ನೂರು ದಿನ ಉದ್ಯೋಗ ಪಡೆದುಕೊಂಡಿವೆ. ಇದರಲ್ಲಿ ವೈಯಕ್ತಿಕ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ರೈತರು ತಮ್ಮ ಜಮೀನುಗಳ ಸ್ವತ್ಛತೆ, ಬದುಗಳ ನಿರ್ಮಾಣಕ್ಕೂ ನರೇಗಾ ಯೋಜನೆಯಡಿ ಅವಕಾಶ ನೀಡಲಾಗಿದೆ.

70.71 ಕೋಟಿ ರೂ. ಕೂಲಿ ಪಾವತಿ: ಪ್ರತಿದಿನ ಒಬ್ಬರಿಗೆ 275 ರೂ.ನಂತೆ ಕೂಲಿ ನಿಗದಿ ಮಾಡಲಾಗಿದ್ದು, ಅದರಂತೆ ಇಲ್ಲಿಯವರೆಗೆ 70.71 ಕೋಟಿ ರೂ. ಕೂಲಿ ಹಣ ಪಾವತಿ ಮಾಡಲಾಗಿದೆ. 3.28 ಕೋಟಿ ರೂ. ಬಾಕಿ ಉಳಿದಿದೆ. ಸಾಮಗ್ರಿಗಳ ವೆಚ್ಚಕ್ಕಾಗಿ 16.12 ಕೋಟಿ ರೂ. ವಿನಿಯೋಗಿಸಲಾಗಿದೆ.

Advertisement

ಮಾಸ್ಕ್, ಸಾಮಾಜಿಕ ಅಂತರ: ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಕೆಲಸ ನಿರ್ವಹಿಸಲು ಒತ್ತು ನೀಡಲಾಗಿದೆ. ಎಲ್ಲರಿಗೂ ಮಾಸ್ಕ್ಗಳನ್ನು ವಿತರಿಸಲಾಗಿದೆ. ಕಾರ್ಮಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೌಷ್ಟಿಕ ಆಹಾರ ಹಾಗೂ ತೋಟಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ಕೈಗೊಂಡ ಕಾಮಗಾರಿಗಳು :  ನರೇಗಾದಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಉದ್ಯೋಗ ನೀಡಲಾಗಿದೆ. ಕೆರೆಗಳ ಹೂಳೆತ್ತುವುದು,ಜಮೀನುಗಳಲ್ಲಿ ಬದುಗಳ ನಿರ್ಮಾಣ, ಇಂಗು ಗುಂಡಿ ನಿರ್ಮಾಣ, ಗೋಕಟ್ಟೆಗಳ  ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಕೆರೆಗಳ ಸ್ವತ್ಛತೆ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಜೊತೆಗೆ ರೈತರ ಜಮೀನು ಗಳಲ್ಲಿ ವೈಯಕ್ತಿಕ ಕಾಮಗಾರಿಗಳಿಗೂ ಅವಕಾಶ ನೀಡಲಾಗಿದೆ.

ಕೋವಿಡ್ ವೇಳೆ ಉದ್ಯೋಗದ ಕೊರತೆ ಹೆಚ್ಚಾಗಿತ್ತು.  ನರೇಗಾದಡಿ ಉದ್ಯೋಗ ನೀಡಬೇಕಾಗಿದೆ. ಅದರಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಸಾಕಷ್ಟು ಯೋಜನೆಗಳ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಒದಗಿಸಲಾಗಿದೆ. ಕೂಲಿ ಹಣ ಬಾಕಿ ಉಳಿದಿದ್ದು, ಅನುದಾನ ಬಂದ ಕೂಡಲೇ ಪಾವತಿ ಮಾಡಲು ಕ್ರಮ ವಹಿಸಲಾಗುವುದು. ಎಸ್‌.ಎಂ.ಜುಲ್ ಫಿಖಾರ್‌ ಉಲ್ಲಾ, ಸಿಇಒ, ಜಿಪಂ, ಮಂಡ್ಯ

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next