Advertisement

ನರೇಗಾ ಕಾರ್ಮಿಕರ ಪರಿಹಾರ ಹೆಚ್ಚಳ

11:26 AM Jun 12, 2021 | Team Udayavani |

ದಾವಣಗೆರೆ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಆಕಸ್ಮಿಕವಾಗಿ ಮರಣ ಹೊಂದಿದರೆಇಲ್ಲವೇ ಶಾಶ್ವತವಾಗಿ ಅಂಗವಿಕಲರಾದರೆ ಈಗ ಎರಡು ಲಕ್ಷ ರೂ. ಪರಿಹಾರ ಸಿಗಲಿದೆ.

Advertisement

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೊಸ ತೀರ್ಮಾನ ಕೈಗೊಂಡಿದ್ದು, ಕಾಮಗಾರಿ ಸ್ಥಳದಲ್ಲಿ ಅವಘಡಗಳಿಗೆ ಸಿಲುಕಿ ಶಾಶ್ವತ ಅಂಗವೈಕಲ್ಯಕ್ಕೊಳಗಾದ ಬಡ ಕೂಲಿ ಕಾರ್ಮಿಕರಿಗೆ ಹಾಗೂ ಕಾರ್ಮಿಕರು ಮೃತಪಟ್ಟರೆ ಅವಲಂಬಿತ ಅಧಿಕೃತ ವಾರಸುದಾರರಿಗೆ ಎರಡು ಲಕ್ಷರೂ. ಪರಿಹಾರ ಕೊಡಲು ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದೆ.

ಈ ಮೊದಲು ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸುವ ಕೂಲಿ ಕಾರ್ಮಿಕರು ಆಕಸ್ಮಿಕವಾಗಿ ಕಾಮಗಾರಿ ಸ್ಥಳದಲ್ಲಿ ಮೃತಪಟ್ಟರೆ ಕನಿಷ್ಠ 30 ಸಾವಿರ ರೂ.ಗಳಿಂದ ಗರಿಷ್ಠ 75 ಸಾವಿರ ರೂ.ಗಳವರೆಗೂ ಪರಿಹಾರ ನೀಡಲಾಗುತ್ತಿತ್ತು. ಸ್ವಾಭಾವಿಕ ಮರಣಕ್ಕೆ30,000ರೂ., ಆಕಸ್ಮಿಕ ಮರಣಕ್ಕೆ 75,000ರೂ., ಶಾಶ್ವತ ಅರೆ ಅಂಗವೈಕಲ್ಯಕ್ಕೆ 37,000ರೂ. ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ 75,000ರೂ. ಪರಿಹಾರ ಸಿಗುತ್ತಿತ್ತು. ಈ ಪರಿಹಾರವನ್ನು ಆಮ್‌ ಆದ್ಮಿ ಬಿಮಾ ಯೋಜನೆಯ ಮಾರ್ಗಸೂಚಿಯಂತೆ ನೀಡಲಾಗುತ್ತಿತ್ತು.

ಪಿಎಂಜೆಜೆಬಿವೈ ಮಾರ್ಗಸೂಚಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಆಮ್‌ ಆದ್ಮಿ ಬಿಮಾ ಯೋಜನೆಯನ್ನು ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳಲ್ಲಿ ವಿಲೀನಗೊಳಿಸಿದೆ. ಆದ್ದರಿಂದ ಇನ್ನು ಮುಂದೆ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯ ಮಾರ್ಗಸೂಚಿ ಅನುಸರಿಸಿ ನರೇಗಾ ಕೂಲಿಕಾರ್ಮಿಕರಿಗೆ ವಿಮೆ ಪರಿಹಾರ ನೀಡಬೇಕು. ಈ ಪರಿಹಾರವು 1-4-2021ರ ನಂತರದ ಎಲ್ಲ ಪ್ರಕರಣಗಳಿಗೆ ಅನ್ವಯಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆಯ ಮಾರ್ಗಸೂಚಿ ಪ್ರಕಾರ ನರೇಗಾ ಕಾರ್ಮಿಕ ಮರಣ ಹೊಂದಿದಲ್ಲಿ ಅಥವಾ ಭಾಗಶಃ ಇಲ್ಲವೇ ಶಾಶ್ವತ ಅಂಗವಿಕಲರಾದರಲ್ಲಿ ಎರಡು ಲಕ್ಷ ರೂ. ಪಾವತಿಸಲು ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಪಂ ಮೂಲಕ ಸೂಚಿಸಿದೆ. ಕಾಮಗಾರಿ ಸ್ಥಳದಲ್ಲಿಯೇ ಮರಣ ಹೊಂದಿದ ಇಲ್ಲವೇ ಕಾಮಗಾರಿ ನಿರ್ವಹಣೆ ವೇಳೆ ಅವಘಡಕ್ಕೊಳಗಾಗಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ಕೂಲಿಕಾರ್ಮಿಕರಿಗೆ ಈ ಪರಿಹಾರದ ಲಾಭ ಸಿಗಲಿದೆ.

Advertisement

4 ಲಕ್ಷ ರೂ. ಪರಿಹಾರ ಪಡೆಯಬಹುದು : 4 ಲಕ್ಷ ರೂ. ಪರಿಹಾರ ಪಡೆಯಬಹುದು ನರೇಗಾ ಕೂಲಿಕಾರ್ಮಿಕರು ಕಾಮಗಾರಿ ಸ್ಥಳದಲ್ಲಿ ಮೃತಪಟ್ಟರೆ ಇಲ್ಲವೇ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ ನಾಲ್ಕು ಲಕ್ಷ ರೂ.ವರೆಗೂ ಪರಿಹಾರ ಪಡೆಯಬಹುದಾಗಿದೆ. ಇಂಥ ಅವಘಡ ಸಂಭವಿಸಿದಾಗ ಜಿಲ್ಲಾ ಪಂಚಾಯಿತಿಯಿಂದ ಎರಡು ಲಕ್ಷ ರೂ. ಸಿಗಲಿದೆ. ಜತೆಗೆ ಕೂಲಿಕಾರ್ಮಿಕರು ತಮ್ಮ ಬ್ಯಾಂಕ್‌ ಖಾತೆ ಮೂಲಕ ಎಲ್ಲ ನಾಗರಿಕರಿಗಾಗಿರುವ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ ಮಾಡಿಸಿ ಪ್ರತಿ ವರ್ಷ ಕೇವಲ330ರೂ. ಕಂತು ಪಾವತಿಸುತ್ತ ಬಂದರೆ ಈ ಯೋಜನೆಯಡಿಯೂ ಪತ್ಯೇಕವಾಗಿ ಎರಡು ಲಕ್ಷ ರೂ. ವಿಮೆ ಪರಿಹಾರ ಪಡೆಯಬಹುದಾಗಿದೆ. ಇದರ ಜತೆಗೆ ಪ್ರತಿವರ್ಷ ಕೇವಲ 12ರೂ. ಕಂತು ಪಾವತಿಸುವ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮಾಡಿಕೊಂಡಿದ್ದರೆ ಇಲ್ಲಿಯೂ ಅಪಘಾತ ವಿಮೆ ಪರಿಹಾರವೂ ಪಡೆಯಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಸಹ ಕಾರ್ಮಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ.

ಈ ಮೊದಲು ನರೇಗಾ ಕೂಲಿಕಾರ್ಮಿಕರು ಕಾಮಗಾರಿ ಸ್ಥಳದಲ್ಲಿ ಆಕಸ್ಮಿಕವಾಗಿ ಮೃತಪಟ್ಟರೆ ಇಲ್ಲವೇ ಗಂಭೀರವಾಗಿ ಗಾಯಗೊಂಡು ಅಂಗವೈಕಲ್ಯಕ್ಕೆ ಒಳಗಾಗಿದ್ದರೆ ಆಮ್‌ ಆದ್ಮಿ ಬಿಮಾ ಯೋಜನೆಯ ಮಾರ್ಗಸೂಚಿಯಂತೆ ಗರಿಷ್ಠ 75 ಸಾವಿರ ರೂ.ವರೆಗೂ ಪರಿಹಾರ ನೀಡಲಾಗುತ್ತಿತ್ತು. ಈಗ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯ ಮಾರ್ಗಸೂಚಿಯಂತೆ ನರೇಗಾ ಕಾರ್ಮಿಕರಿಗೆ ಎರಡು ಲಕ್ಷ ರೂ. ವರೆಗೂ ಪರಿಹಾರ ನೀಡಬಹುದಾಗಿದೆ.-ಸಿದ್ದರಾಮಸ್ವಾಮಿ ಎಚ್‌.ಆರ್‌., ಜಿಲ್ಲಾ ಸಹಾಯಕ ಕಾರ್ಯಕ್ರಮ ಸಂಯೋಜಕರು, ಜಿಪಂ. ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next