ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದಲ್ಲಿ ಹೆಚ್ಚು ಮಹಿಳೆಯರು ತೊಡಗುವಂತೆ ಮಾಡಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಹಿಳಾ ಕಾಯಕೋತ್ಸವ ನಡೆಸಿದ್ದು, ಇದರಲ್ಲಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಹೆಚ್ಚಿನ ಮಹಿಳೆಯರಿಗೆ ಕೆಲಸ ನೀಡಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ.
ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುವುದನ್ನು ತಪ್ಪಿಸಿ ಸ್ಥಳದಲ್ಲೇ ಉದ್ಯೋಗ ನೀಡಿ ಅವರನ್ನು ಸಶಕ್ತರನ್ನಾಗಿ ಮಾಡಲು ಸರ್ಕಾರವು ಉದ್ಯೋಗ ಖಾತ್ರಿ ಯೋಜನೆ ಆರಂಭಿಸಿದೆ. ಅದರಲ್ಲಿ ಪುರುಷರೇ ಹೆಚ್ಚು ಕೆಲಸ ಮಾಡಿ, ಮಹಿಳೆಯರ ಭಾಗವಹಿಸುವಿಕೆ ತುಂಬಾ ಕಡಿಮೆ ಇರುವುದನ್ನು ಗಮನಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನರೇಗಾ ಕೆಲಸದಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳಬೇಕು. ಅವರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಾರಿಯರು ನರೇಗಾ ಕೆಲಸದಲ್ಲಿ ಪಾಲ್ಗೊಳ್ಳುವಿಕೆಯಲ್ಲಿ ಕಡಿಮೆ ಸಾಧನೆ ಮಾಡಿದ ರಾಜ್ಯದ 904 ಗ್ರಾಮ ಪಂಚಾಯಿತಿಗಳ ಪಟ್ಟಿ ಮಾಡಿ ಆ ಗ್ರಾಪಂನಲ್ಲಿ ಕೆಲವು ತಿಂಗಳ ಹಿಂದೆ ಮಹಿಳಾ ಕಾಯಕೋತ್ಸವ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿತ್ತು.
ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಗ್ರಾಪಂನಲ್ಲಿ ಹೆಚ್ಚು ಕೆಲಸ ನೀಡಿ ಅವರಿಗೆ ಉದ್ಯೋಗದ ಖಾತ್ರಿಯನ್ನು ನೀಡಿ ಚೀಟಿಯನ್ನೂ ವಿತರಣೆ ಮಾಡಬೇಕು ಎಂದು ಆಯುಕ್ತರು ಸೂಚನೆ ನೀಡಿದ ಹಿನ್ನೆಲೆಯಲ್ಲಿ 904 ಗ್ರಾಮ ಪಂಚಾಯಿತಿಗಳಲ್ಲೂ ಮಹಿಳಾ ಕಾಯಕೋತ್ಸವ ನಡೆದಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲೇ ಹೆಚ್ಚು ಮಹಿಳೆಯರಿಗೆ ಕೆಲಸ ಕೊಟ್ಟು ಗಮನ ಸೆಳೆದಿದೆ. ಕೊಪ್ಪಳ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ರಾಯಚೂರು ಜಿಲ್ಲೆ 3ನೇ ಸ್ಥಾನದಲ್ಲಿದ್ದರೆ, ರಾಮನಗರ 4 ಹಾಗೂ ಯಾದಿಗಿರಿ 5ನೇ ಸ್ಥಾನದಲ್ಲಿವೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲೇ ಮಹಿಳೆಯರಿಗೆ ಹೆಚ್ಚು ಕೆಲಸ ನೀಡಲಾಗಿದೆ. 7 ಲಕ್ಷ ಮಾನವ ದಿನ ಸೃಜನೆ: ರಾಜ್ಯದಲ್ಲಿ ಆಯ್ದ 904 ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಮಹಿಳಾ ಕಾಯಕೋತ್ಸವದ ಅಭಿಯಾನದಲ್ಲಿ 7,42,661 ನಾರಿಯರಿಗೆ ಕೆಲಸ ನೀಡಲಾಗಿದೆ. ಈ ಪೈಕಿ ಬಳ್ಳಾರಿ ಜಿಲ್ಲೆಯಲ್ಲಿ 1,82,195 ಮಾನವ ದಿನಗಳ ಸೃಜನೆ ಮಾಡಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮಹಿಳೆಯರು ಕೆಲಸ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 60,591 ಮಾನವ ದಿನಗಳ ಸೃಜನೆ, ರಾಯಚೂರು ಜಿಲ್ಲೆಯಲ್ಲಿ 38107 ಮಾನವ ದಿನ ಸೃಜನೆ ಮಾಡಿ ಕೆಲಸ ನೀಡಿದೆ. ಒಟ್ಟಾರೆ ರಾಜ್ಯದಲ್ಲಿ ನಡೆದ ಮಹಿಳಾ ಕಾಯಕೋತ್ಸವದಲ್ಲಿ ಜಿಲ್ಲೆಯ ಹೆಚ್ಚು ಗ್ರಾಪಂನಲ್ಲಿ ಸ್ತ್ರೀಯರಿಗೆ ಕೆಲಸ ನೀಡಿ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ. ಇದು ಜಿಲ್ಲೆಯಲ್ಲಿ ಗಮನಾರ್ಹ ವಿಷಯವಾಗಿದೆ.
ದತ್ತು ಕಮ್ಮಾರ