ಆಳಂದ: ತಾಲೂಕಿನ ತೀರಾ ಹಿಂದುಳಿದ ಚಿಂಚನ ಸೂರ ಗ್ರಾಮ ಹಿಂದೆ ಕಮಲಾಪುರ ಮತಕ್ಷೇತ್ರ ದಿಂದ ವಿಭಜಿತವಾಗಿ ಕಲಬುರಗಿ ಗ್ರಾಮೀಣ ಕ್ಷೇತ್ರಕ್ಕೊಳ ಪಟ್ಟಿದ್ದು, ಚಿಂಚನಸೂರ ಗ್ರಾಪಂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯನ್ನು ಸದ್ಬಳಕೆ ಮಾಡಿಕೊಂಡಿದೆ.
ಬಿಜೆಪಿ ಬೆಂಬಲಿತ ಚಿಂಚನಸೂರ ಗ್ರಾಪಂ ಅಧ್ಯಕ್ಷ ದಿಲೀಪ ಘಂಟಿ ನೇತೃತ್ವದ ಆಡಳಿತ ಮಂಡಳಿ ಕಾರ್ಮಿಕರಿಗೆ ನರೇಗಾ ಯೋಜನೆ ಅಡಿ ಕೆಲಸ ನೀಡಿ ಕೂಲಿ ಪಾವತಿಸಿದ್ದಾರೆ. ಚಿಂಚನಸೂರ ಗ್ರಾಪಂ ವ್ಯಾಪ್ತಿಗೆ ತೋಳನವಾಡಿ, ಲಿಂಗನವಾಡಿ, ಚಿಂಚನಸೂರ ಗ್ರಾಮಗಳು ಬರುತ್ತಿದ್ದು, ಒಟ್ಟು 16 ಆಡಳಿತ ಮಂಡಳಿ ಸದಸ್ಯರಿದ್ದಾರೆ. ಸುಮಾರು ಏಳು ಸಾವಿರ ಜನಸಂಖ್ಯೆ ಹೊಂದಿದ್ದು, ಶಾಸಕ ಬಸವರಾಜ ಮತ್ತಿಮಡು ಕ್ಷೇತ್ರದ ಕಾರ್ಯಗಳಿಗೆ ಕೈ ಜೋಡಿಸುತ್ತಿದ್ದಾರೆ.
ಒಟ್ಟು 3500 ಸಾವಿರ ಕೂಲಿ ಕಾರ್ಮಿಕರಲ್ಲಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ನರೇಗಾದಲ್ಲಿ ಕೆಲಸ ಕೊಟ್ಟು ಅರಣ್ಯೀಕರಣ, ರೈತರ ಹೊಲದಲ್ಲಿ ಬದು ನಿರ್ಮಾಣ, ಚೆಕ್ ಡ್ಯಾಂ ಹೂಳೆತ್ತುವ ಕಾಮಗಾರಿಗಳನ್ನು ಮಾಡಿಸಲಾಗಿದೆ. ಅಂತರ್ಜಲ ಹಿಡಿದಿಡುವ ಕೆಲಸದ ಜತೆಗೆ ಸುಮಾರು 1400 ಜಾಬ್‌ಕಾರ್ಡ್ ಹೊಂದಿದ ಕಾರ್ಮಿಕರಿಂದ ಹಾಗೂ ಹೊಸದಾಗಿ ನೋಂದಾಯಿತ ಕಾರ್ಮಿಕರನ್ನೊಳಗೊಂಡ ವಿವಿಧ ಕಾಮಗಾರಿಗೆ ಒತ್ತು ನೀಡಿ ಸುಮಾರು 63.75 ಲಕ್ಷ ರೂ. ಕೂಲಿ ಪಾವತಿಸಲಾಗಿದೆ. ನರೇಗಾದಡಿ ಪ್ರಸಕ್ತ ಸಾಲಿನಲ್ಲಿ 34147 ಮಾನವ ದಿನಗಳ ಗುರಿ ಹೊಂದಲಾಗಿದೆ.
ಈ ಪೈಕಿ 22061 ದಿನಗಳ (ಶೇ. 64)ಗುರಿ ಸಾಧಿ ಸಲಾಗಿದೆ. ರೈತರ ಹೊಲದಲ್ಲಿ 80 ಬದು ನಿರ್ಮಾಣ ಕಾಮಗಾರಿ, ಲಿಂಗನವಾಡಿ ತೋಳನವಾಡಿಯಲ್ಲಿ ಹಳ್ಳ ಹೂಳೆತ್ತಿದ್ದು, ಚಿಂಚನಸೂರನಲ್ಲಿ ಗೋಕಟ್ಟೆ, ನಾಲಾ ಹಳ್ಳಾ ಹೂಳೆತ್ತುವ ಕಾಮಗಾರಿಗೆ ಒತ್ತು ನೀಡಲಾಗಿದೆ. ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೆಚ್ಚಿನ ಅನುದಾನ ಒದಗಿಸುವ ಮೂಲಕ ಇಲ್ಲಿನ ಕಾರ್ಮಿಕರ ಬದುಕಿಗೆ ಆಶ್ರಯ ಕಲ್ಪಿಸುವ ಜತೆಗೆ ಹಿಂದುಳಿದ ಪಂಚಾಯತ್ ಎನ್ನುವ ಹಣೆಪಟ್ಟಿ ಅಳಿಸಬೇಕಿದೆ.
ಹೆಚ್ಚು ಕಾಮಗಾರಿ ನಡೆಸಲು ಸಲಹೆ: ಚಿಂಚನಸೂರ ಗ್ರಾಪಂನಲ್ಲಿ ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಕಾಮಗಾರಿ ಆರಂಭಿಸಬೇಕೆನ್ನುವ ಬೇಡಿಕೆ ಬಂದ ಮೇಲೆ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿದ್ದರಿಂದ ನಿರೀಕ್ಷಿತ ಕಾಮಗಾರಿ ಕೈಗೊಂಡು ಕಾರ್ಮಿಕರಿಗೆ ಕೂಲಿ ಪಾವತಿಸಿದ್ದಾರೆ. ಹೆಚ್ಚು ಅಗತ್ಯ ಕಾಮಗಾರಿ ನಡೆಸಲು ಸಲಹೆ ನೀಡಲಾಗಿದೆ ಎಂದು ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ ತಿಳಿಸಿದ್ದಾರೆ.