Advertisement

ದುಡಿಯುವ ಕೈಗಳಿಗೆ ಕೆಲಸ ನೀಡಿದ ನರೇಗಾ

10:47 AM May 18, 2020 | Suhan S |

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಬಹುತೇಕ ಕ್ಷೇತ್ರಗಳುಸ್ಥಗಿತಗೊಂಡಿವೆ ಇಲ್ಲವೆ ಮಂದಗತಿಯಲ್ಲಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜನರಿಗೆ ಉದ್ಯೋ ನೀಡುವ, ಕೃಷಿಗೆ ಪೂರಕ ಆಸ್ತಿ ಸೃಷ್ಟಿಸುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿಯ ಚಟುವಟಿಕೆಗಳು ಭರ್ಜರಿಯಾಗಿ ಸಾಗತೊಡಗಿವೆ. ಸಾವಿರಾರು ಫ‌ಲಾನುಭವಿಗಳ ಬದುಕಿಗೆ ನೆರವಾಗಿದೆ.

Advertisement

ನರೇಗಾ ಅಡಿಯಲ್ಲಿ ತಾಲೂಕಿನಾದ್ಯಂತ ಬದು ನಿರ್ಮಾಣ, ಕೃಷಿ ಹೊಂಡ, ರಸ್ತೆ ಅಭಿವೃದ್ಧಿ, ಕೊಳವೆ ಬಾವಿ ಮರುಪೂರಣ, ಆಶ್ರಯ ಮನೆಗಳ ನಿರ್ಮಾಣ, ಕೊಟ್ಟಿಗೆ ನಿರ್ಮಾಣ, ಎರೆಹುಳು ತೊಟ್ಟಿ ನಿರ್ಮಾಣ, ಚರಂಡಿ ನಿರ್ಮಾಣ, ವಿವಿಧ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

26 ಗ್ರಾಪಂಗಳಲ್ಲಿ ಕೆಲಸ: ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಒಟ್ಟು 26 ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ 2020-21ನೇ ಸಾಲಿಗೆ 4.60 ಲಕ್ಷ ಮಾನವ ದಿನಗಳ ಗುರಿ ನಿಗದಿ ಮಾಡಲಾಗಿದ್ದು, ಇದುವರೆಗೆ 17,927 ಮಾನವ ದಿನಗಳ ಸೃಜನೆ ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜೂನ್‌ ಅಂತ್ಯದ ವೇಳೆಗೆ ತಾಲೂಕಿನ ಎಲ್ಲಾ ಕೃಷಿಹೊಂಡ, ಬದು ಹಾಗೂ ಚೆಕ್‌ ಡ್ಯಾಮ್‌ಗಳನ್ನು ಪೂರ್ಣಗೊಳಿಸಿ ಮಳೆ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ.

ಕಾಮಗಾರಿಗೆ ಬರುತ್ತಿಲ್ಲ: ವಿವಿಧ ಮಹಾನಗರ ಹಾಗೂ ಅನ್ಯ ರಾಜ್ಯಗಳಿಗೆ ವಲಸೆ ಹೋಗಿದ್ದ ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶಗಳಿಗೆ ಮರಳಿದ್ದು, ಕೆಲಸವಿಲ್ಲದೆ ಕುಳಿತಿದ್ದಾರೆ. ನರೇಗಾ ಯೋಜನೆಯಡಿ ಕೆಲಸಗಳು ನಡೆಯುತ್ತಿದ್ದು, ಜನರು ಹೆಚ್ಚಾಗಿ ಬರುತ್ತಿಲ್ಲ. ಈಗಾಗಲೇ ತಾಲೂಕಿನಾದ್ಯಂತ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಇನ್ನು ಹೆಚ್ಚಿನ ಜನರು ಆಗಮಿಸಿದಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಿಸಬಹುದಾಗಿದೆ. ನರೇಗಾದಡಿ ಪ್ರತಿಯೊಬ್ಬರಿಗೆ 100 ದಿನಗಳ ಕೆಲಸ ದೊರೆಯುತ್ತಿದ್ದು, ನಿತ್ಯ 275 ರೂ. ಕೂಲಿ ಹಾಗೂ ಅವರದ್ದೇ ಗುದ್ದಲಿ-ಸಲಿಕೆ ತಂದರೆ ಅದರ ವೆಚ್ಚ 10 ರೂ. ಸೇರಿ ಒಟ್ಟು 285 ರೂ. ನೀಡಲಾಗುತ್ತಿದೆ.

ಮುಂಜಾಗ್ರತೆ-ಆ್ಯಪ್‌ ನೆರವು: ಕೆಲಸಕ್ಕೆ ಆಗಮಿಸುವ ಕೂಲಿಕಾರರಿಗೆ ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಕಡ್ಡಾಯ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳುವುದರ ಜತೆಗೆ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ “ಕಾಯಕ ಮಿತ್ರ’ ಆ್ಯಪ್‌ ಆರಂಭಿಸಿದ್ದು, ಇದನ್ನು ಬಳಸಿಕೊಂಡು ಕೆಲಸಕ್ಕೆ ಬರಬಹುದಾಗಿದೆ. ನರೇಗಾ ಯೋಜನೆಯಡಿ ರಾಜ್ಯ ಸರಕಾರ ಮೇ 19ರಂದು ರೈತರ ಜಮೀನಿನಲ್ಲಿ ಬದು ನಿರ್ಮಾಣಮಾಸಾಚರಣೆ ಘೋಷಣೆ ಮಾಡಿದ್ದು, ಎಲ್ಲ ತಾಲೂಕುಗಳಲ್ಲೂ ನಡೆಯಲಿದೆ.

Advertisement

ಗ್ರಾಮೀಣ ಜನರಿಗೆ ಉದ್ಯೋಗ ಕಲ್ಪಿಸಲು ನರೇಗಾ ಯೋಜನೆ ನೆರವಾಗಿದೆ. ಕೂಲಿ ಕಾರ್ಮಿಕರ ಖಾತೆಗೆ 15 ದಿನಗಳ ನಂತರ ನೇರವಾಗಿ ವೇತನ ಪಾವತಿಸಲಾಗುತ್ತಿದ್ದು, ಎಷ್ಟು ಜನ ಕೂಲಿ ಕಾರ್ಮಿಕರುಬಂದರೂ ಉದ್ಯೋಗ ನೀಡಲಾಗುವುದು. ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. – ಗಂಗಾಧರ ಕಂದಕೂರ, ತಾಪಂ ಸಹಾಯಕ ನಿರ್ದೇಶಕ

ಜೂನ್‌ನಲ್ಲಿ ಕೃಷಿ ಕೆಲಸ ಆರಂಭವಾಗಲಿದ್ದು, ಅಷ್ಟರಲ್ಲಿ ಕೂಲಿ ಕಾರ್ಮಿಕರಿಂದ ನರೇಗಾ ಯೋಜನೆಯಡಿ ಸಾಧ್ಯವಾದಷ್ಟು ಕೆಲಸ ಮಾಡಿಸಲಾಗುವುದು. ಸದ್ಯ ಉಮಚಗಿ ಹಾಗೂ ಮಲ್ಲಿಗವಾಡ ವ್ಯಾಪ್ತಿಯಲ್ಲಿ ಸುಮಾರು 260 ಕೂಲಿ ಕಾರ್ಮಿಕರು ಬರುತ್ತಿದ್ದು, 35ಕ್ಕೂ ಹೆಚ್ಚು ಬದು, ಎರಡು ದನದ ಕೊಟ್ಟಿಗೆ ನಿರ್ಮಿಸಲಾಗಿದೆ. ಮುಂದಿನ ವಾರದಿಂದ ಕೆರೆ ಕೂಡಿ ಕಾಮಗಾರಿ ಆರಂಭಿಸಲಾಗುವುದು. ವಾರದ ಒಳಗಾಗಿ ಕೂಲಿ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿದೆ. ಕೊರೊನಾ ಮುಂಜಾಗ್ರತಾಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.  -ದಾವಲಸಾಬ್‌ ಪಿಂಜಾರ, ಉಮಚಗಿ ಪಿಡಿಒ

 

-ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next