ಬಂಗಾರಪೇಟೆ: ರಾಜರ ಕಾಲದಲ್ಲಿಯೂ ಇದ್ದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಬ್ರಿಟಿಷರು ಕಾನೂನು ರೂಪಿಸಿದ್ದರು. ಸ್ವಾತಂತ್ರ್ಯನಂತರ ಲೋಕಪಾಲ ಮತ್ತು ಲೋಕಾಯುಕ್ತ ಸ್ಥಾಪಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟಾಚಲಪತಿ ಹೇಳಿದರು.
ತಾಲೂಕಿನ ಮಾವಹಳ್ಳಿ ಗ್ರಾಪಂ ಕಚೇರಿಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಲೋಕಾಯುಕ್ತ ಮೊದಲೇ ಸ್ಥಾಪಿಸಿದ್ದರೂ ಹೆಚ್ಚು ಹೆಸರುವಾಸಿಯಾಗಿದ್ದು, ಕಾರ್ಯರೂಪಕ್ಕೆ ಬಂದಿದ್ದು ಕರ್ನಾಟಕದಲ್ಲಿಯೇ ಎಂದು ಹೇಳಿದರು.
ದೂರು ನೀಡಿ: ಯಾವುದೇ ಸಮಸ್ಯೆ ಇದ್ದರೂ ಸಾರ್ವಜನಿಕರು ಎಸಿಬಿಗೆ ದೂರು ನೀಡಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಲಂಚಮುಕ್ತ ಸಮಾಜ ನಿರ್ಮಾಣ ಮಾಡಲು ಎಸಿಬಿ ಶ್ರಮಿಸುತ್ತಿದೆ. ತಾಲೂಕು ಮಟ್ಟದಲ್ಲಿ ತಿಂಗಳಿಗೊಮ್ಮೆ ದಿನಕ್ಕೆ ಎರಡು ಗ್ರಾಪಂಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುತ್ತಿದೆ. ಎಲ್ಲಾ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಮೂಲಕ ಇತ್ಯರ್ಥ ಮಾಡಲಾಗುತ್ತಿದೆ ಎಂದು ವಿವರಿಸಿದರು.
ದುರ್ಬಳಕೆ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲವು ಗ್ರಾಪಂಗಳಲ್ಲಿ ಪಿಡಿಒಗಳು ಸಾರ್ವಜನಿಕರ ಬ್ಯಾಂಕ್ ಖಾತೆಗೆ ಹಣ ಹಾಕಿ, ದುಡ್ಡು ಡ್ರಾ ಮಾಡಿಕೊಟ್ಟವರಿಗೆ ಇಂತಿಷ್ಟು ಹಣ ನೀಡಿ, ಉಳಿದ ಹಣ ಪಡೆದುಕೊಳ್ಳುವ ಮೂಲಕ ಯೋಜನೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗಡಿ ಗ್ರಾಮಗಳ ಜನರಿಗೆ ಮಾಹಿತಿ ಸಿಗದೇ, ತಾಲೂಕು ಕೇಂದ್ರದಲ್ಲಿ ನಡೆಯುವ ಎಸಿಬಿ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾವೇ ಪ್ರತಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಮಾಹಿತಿ ಹಾಕದೇ ನಿರ್ಲಕ್ಷ್ಯ: ಗ್ರಾಪಂ, ತಾಲೂಕು ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಸಾರ್ವಜನಿಕರು ತೊಂದರೆಗಳಾಗಿದ್ದಲ್ಲಿ, ಲಂಚಕ್ಕೆ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಪೀಡಿಸುತ್ತಿದ್ದರೆ ಎಸಿಬಿಗೆ ದೂರು ನೀಡಬಹುದು. ಈ ಬಗ್ಗೆ ಮಾಹಿತಿ ಫಲಕ ಹಾಕುವಂತೆ ಗ್ರಾಪಂ ಕಚೇರಿಗಳಿಗೆ ಸೂಚನೆ ನೀಡಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ತಹಶೀಲ್ದಾರ್ ಮೂಲಕ ಸಮಸ್ಯೆ ಇತ್ಯರ್ಥ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಕೆಲಸ ಮಾಡಿಕೊಡದೇ ಸತಾಯಿಸುವುದು, ಅನಗತ್ಯವಾಗಿ ವಿಳಂಬ, ಲಂಚಕ್ಕೆ ಪೀಡಿಸುವುದು ಕಂಡುಬಂದಲ್ಲಿ ತಕ್ಷಣವೇ ನಮ್ಮ ಗಮನಕ್ಕೆ ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಮಾವಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸೇರಿದ ಎರಡು ದೂರುಗಳು ಬಂದಿದ್ದು, ಸಂಬಂಧಪಟ್ಟ ತಹಶೀಲ್ದಾರ್‌ಗೆ ಕಳುಹಿಸಿ ಕ್ರಮಕೈಗೊಳ್ಳಲು ತಿಳಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಅಮರಾವತಿ ಚೌಡೇಗೌಡ, ಎಪಿಎಂಸಿ ಅಧ್ಯಕ್ಷ ಎಸ್.ನಾರಾಯಣಗೌಡ, ಗ್ರಾಪಂ ಉಪಾಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಅಶ್ವತ್ಥ್ನಾರಾಯಣಗೌಡ, ಪಿಡಿಒ ರಾಮಮೂರ್ತಿ, ಕಾರ್ಯದರ್ಶಿ ಸೋಮಶೇಖರ್, ಎಸಿಬಿ ಸಿಬ್ಬಂದಿಯಾದ ಕೃಷ್ಣೇಗೌಡ, ಮಧುಸೂದನ್ ಇದ್ದರು.