Advertisement

ನರೇಗಾ ಯೋಜನೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ : ಸಚಿವ ಈಶ್ವರಪ್ಪ

08:34 PM Feb 04, 2022 | Team Udayavani |

ರಬಕವಿ ಬನಹಟ್ಟಿ: ದೇಶದ ಜನರ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದ್ದರಿಂದ ನರೇಗಾ ಯೋಜನೆಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಸಚಿವ ಕೆ.ಎಸ್‍.ಈಶ್ವರಪ್ಪ ತಿಳಿಸಿದರು.

Advertisement

ಅವರು ಶುಕ್ರವಾರ ತಾಲ್ಲೂಕಿನ ಜಗದಾಳ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಸೇವಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ರಾಜೀವ ಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಇಂದು ಜಲಜೀವನ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮದ ಪ್ರತಿ ಮನೆಗೂ ನೀರು ಪೂರೈಕೆಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ರಾಜ್ಯದಲ್ಲಿಯೂ ಕೂಡಾ ಪ್ರತಿನಿತ್ಯ ಹತ್ತು ಸಾವಿರಕ್ಕಿಂತ ಹೆಚ್ಚು ಮನೆಗಳಿಗೆ ನಲ್ಲಿಗಳ ಸಂಪರ್ಕವನ್ನು ನೀಡಲಾಗುತ್ತಿದೆ.

ಗ್ರಾಮ ಪಂಚಾಯ್ತಿ ಕಾರ್ಯಾಲಯ ಒಂದು ದೇವಾಲಯ. ಆದ್ದರಿಂದ ಇಲ್ಲಿ ಕರ್ತವ್ಯ ನಿರ್ವಹಣೆ ಮಾಡುವವರು ಯಾವುದೆ ಲಂಚ ತೆಗೆದುಕೊಳ್ಳದೆ ಗ್ರಾಮದ ಜನರ ಸೇವೆಗಾಗಿ ಕರ್ತವ್ಯ ನಿರ್ವಹಿಸಬೇಕು. ಭಾರತ ಇನ್ನೀತರ ದೇಶಗಳಿಂದ ಭಿಕ್ಷೆ ಬೇಡುವ ರಾಷ್ಟ್ರವಾಗಿ ಉಳಿದಿಲ್ಲ. ಈಗ ಸಣ್ಣ ಪುಟ್ಟ ರಾಷ್ಟ್ರಗಳಿಗೆ ಸಾಲವನ್ನು ನೀಡುವ ರಾಷ್ಟ್ರವಾಗಿದೆ.

ಭಾರತೀಯರು ವಿಶ‍್ವಕ್ಕೆ ನೀಡಿದ ಯೋಗದಿಂದಾಗಿ ಭಾರತದ ಗೌರವ ಹೆಚ್ಚಾಗಿದೆ. ಪ್ರತಿಯೊಬ್ಬರು ಪರಸ್ಪರ ಸಹಕಾರದ ಮೂಲಕ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಬೇಕು. ಪಂಚಾಯ್ತಿ ಕಾರ್ಯಾಲಯದಲ್ಲಿ ಪಿಠೋಪಕರಣಕ್ಕಾಗಿ ರೂ. 5 ಲಕ್ಷ ನೀಡುವುದಾಗಿ ಸಚಿವ ಕೆ.ಎಸ್‍.ಈಶ್ವರಪ್ಪ ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ವ್ಯಕ್ತಿ ಮತ್ತು ಅಧಿಕಾರ ಯಾವುದು ಶಾಶ್ವತ ಅಲ್ಲ. ಚುನಾವಣೆ ಮುಗಿದ ಮೇಲೆ ಎಲ್ಲ ಸದಸ್ಯರು ಕೂಡಿಕೊಂಡು ಗ್ರಾಮದ ಅಭಿವೃದ್ಧಿಗಾಗಿ ಪ್ರಯತ್ನಿಸಬೇಕು. ಗ್ರಾಮದ ಅಭಿವೃದ್ಧಿಗಾಗಿ ಶೌಚಾಲಯ, ಇಂಗು ಗುಂಡಿ, ಜಾನುವಾರು ಶೆಡ್ ನಿರ್ಮಾಣ, ಚರಂಡಿ, ಸಿಸಿ ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯ್ತಿ ಸದಸ್ಯರು ಒಟ್ಟಾಗಿ ಕೂಡಿಕೊಂಡು ಇವೆಲ್ಲ ಅನುದಾನಗಳನ್ನು ಬಳಸಿಕೊಳ್ಳಬೇಕು ಎಂದರು.

ಬಲಾದಿಯ ವೇದಮೂರ್ತಿ ಬಸಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ ಅಸ್ಕಿ, ಉಪಾಧ್ಯಕ್ಷೆ ಕಮಲಾ ಜನವಾಡ, ತಹಶೀಲ್ದಾರ್ ಸಂಜಯ ಇಂಗಳೆ, ಅಮರೇಶ ನಾಯಕ, ವಿಕಾಸ ರಾಠೋಢ, ಜಿಲ್ಲಾ ಪಂಚಾಯ್ತಿ ವಿಶೇಷ ಅಧಿಕಾರಿ ಜಯರಾಮ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು.

ಪ್ರಿಯಾಂಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಗಡೆನ್ನರವ ನಿರೂಪಿಸಿದರು. ಮ.ಕೃ.ಮೇಗಾಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿ.ಎಸ್‍.ನ್ಯಾಮಗೌಡ, ಶಂಕರ ಗೊಬ್ಬಾಣಿ, ಪುಂಡಲೀಕ ಪಾಲಭಾವಿ, ಬಾಬಾಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ದುಂಡಯ್ಯ ಪೂಜಾರಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next