ದೇವರಹಿಪ್ಪರಗಿ: ದುಡಿಯುವ ಕೈಗಳಿಗೆ ನರೇಗಾ ಯೋಜನೆ ನೆರವಾಗಲಿದ್ದು, ಗುಳೆ ತಪ್ಪಿಸಿ ಉದ್ಯೋಗ ಒದಗಿಸಲು ಸಹಕಾರಿಯಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ ಹೇಳಿದರು.
ಮಣೂರ ಗ್ರಾಪಂ ವ್ಯಾಪ್ತಿಯ ದೇವೂರ ತಾಂಡಾದಲ್ಲಿ ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ದಿನನಿತ್ಯ ದುಡಿಯುವ ಕೈಗಳಿಗೆ ನಿಶ್ಚಿತ ರೂಪದಲ್ಲಿ ಕೆಲಸ ಕೊಡುತ್ತಿದೆ. ವರ್ಷದಲ್ಲಿ ನೂರು ದಿನ ಕಾಯಂ ಕೆಲಸ ನೀಡುತ್ತಿದ್ದು ಕಾರ್ಮಿಕರು ಪ್ರತಿಯೊಬ್ಬರು ಇದರ ಸದುಪಯೋಗ ಮಾಡಿಕೊಳ್ಳಬೇಕು. ನರೇಗಾ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿದ್ದು, ಶಾಲೆಗಳಿಗೆ ಭೌತಿಕ ಸೌಲಭ್ಯ, ಶೌಚಾಲಯ ನಿರ್ಮಾಣ, ಮೈದಾನ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣ, ಚೆಕ್ ಡ್ಯಾಂಗಳು, ಸೇವಾ ಕೇಂದ್ರಗಳು, ಗ್ರಾಪಂ ಕಟ್ಟಡಗಳು, ಬಿಸಿಯೂಟ ಕೋಣೆಗಳು ಸೇರಿದಂತೆ ಹಲವಾರು ಜನೋಪಯೋಗಿ ಕೆಲಸಗಳು ನಡೆಯುತ್ತಿವೆ. ರೈತರು ತಮ್ಮ ಹೊಲ ಗದ್ದೆಗಳಲ್ಲಿಯೂ ಸಹ ಕೆಲಸ ಮಾಡಿಕೊಳ್ಳಬಹುದು ಎಂದರು.
ಪಂಚಾಯತ್ ಕಾರ್ಯದರ್ಶಿ ಮಾದರ ಹಾಗೂ ತಾಂಡಾ ರೋಜಗಾರ ಮಿತ್ರ ಸುನೀಲ ನಾಯಿಕ ಉದ್ಯೋಗ ಖಾತ್ರಿ ಕಾಮಗಾರಿಗಳ ಕುರಿತು ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿದರು.
ಮಣೂರ ಗ್ರಾಪಂ ಅಧ್ಯಕ್ಷ ರಾಚಪ್ಪ ಕಮತಗಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ರಾಜೇಶ್ವರಿ ದೇವೂರ, ಗ್ರಾಪಂ ಸದಸ್ಯರಾದ ಸಂಗನಗೌಡ ಬಿರಾದಾರ, ಸುರೇಶ ನಾಯಿಕ, ಶೋಭಾ ರಾಠೊಡ, ಕಲ್ಮೇಶಗೌಡ ಬಗಲಿ, ಅಬ್ಟಾಸಲಿ ಬಾಗವಾನ, ಮಲ್ಲೇಶ ಗಂಗಶೆಟ್ಟಿ, ರೇವು ಪವಾರ, ಕೇಸು ರಾಠೊಡ, ಶಿವು ನಾವಿ, ಪಟೇಲ್ ಮುಜಾವರ ಇದ್ದರು.