ದೇವನಹಳ್ಳಿ: ಮಳೆ ಇಲ್ಲದೆ ಬರಗಾಲದ ಪರಿಸ್ಥಿತಿ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನರೇಗಾ ಸಂಜೀವಿನಿಯಾಗಿದೆ. ಜಿಪಂ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಅನುಕೂಲವಾಗಲು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಹಿಂಗಾರು ಮಳೆಯೂ ಬಾರದೇ ರೈತರು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಮಳೆ ಇಲ್ಲದೆ ಮತ್ತೂಂದು ಕಡೆ ಬರದ ಪರಿಸ್ಥಿತಿ ಎದುರಿಸುತ್ತಿರುವ ರೈತರಿಗೆ ನರೇಗಾ ಹೆಚ್ಚು ಅನುಕೂಲತೆ ಆಗಿದೆ.
ವಿನಾಯ್ತಿ ನೀಡಲಾಗಿದೆ: ಗ್ರಾಮೀಣ ಜನರಿಗೆ ದೊಡ್ಡ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನ ಬರಪೀಡಿತ ಪ್ರದೇಶಗಳಲ್ಲಿ 150 ದಿನ ಉದ್ಯೋಗ ಖಾತ್ರಿ ನೀಡಲಾಗುತ್ತಿದೆ. ಮಹಿಳೆ, ಪುರುಷರಿಗೆ ಮತ್ತು ವಿಕಲಚೇತನರಿಗೂ, 65 ವರ್ಷ ಮೇಲ್ಪಟ್ಟವರಿಗೂ ಇಲ್ಲಿ ವಿನಾಯ್ತಿ ಸಹಿತ ಅವಕಾಶ ನೀಡಲಾಗಿದೆ. ಮಹ್ಮಾತ ಗಾಂಧಿ ನರೇಗಾ ಯೋಜನೆಯಡಿ ಪ್ರತಿ ಫಲಾನುಭವಿಗೆ (ಪ್ರತಿ ಅರ್ಹ ಕುಟುಂಬಕ್ಕೆ) ನೀಡಬಹುದಾದ ವೈಯಕ್ತಿಕ ಕಾಮಗಾರಿಗಳ ಗರಿಷ್ಠ ಮೊತ್ತದ ಮಿತಿಯನ್ನು 2.50 ಲಕ್ಷ ರೂ.ನಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅದರಂತೆ, ಯೋಜನೆಯಡಿ ನೋಂದಾಯಿತ ಒಂದು ಅರ್ಹ ಕುಟುಂಬ ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷ ರೂ.ಗಳವರೆಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಬಹುದಾಗಿದೆ.
ನರೇಗಾ ಯೋಜನೆಯಡಿ ಕುರಿ, ಮೇಕೆ, ಹಂದಿ, ಕೋಳಿ ಶೆಡ್, ದನದ ಕೊಟ್ಟಿಗೆ, ಕೃಷಿ ಹೊಂಡ, ವೈಯಕ್ತಿಕ ಬದು ನಿರ್ಮಾಣ, ಬಚ್ಚಲು ಗುಂಡಿ ಮತ್ತು ತೋಟಗಾರಿಕೆ ಬೆಳೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆಯಡಿ ವೈಯಕ್ತಿಕ ಕಾಮಗಾರಿಗೆ ಸಹಾಯಧನ ನೀಡಲಾಗುತ್ತದೆ.
ಯಾವುದಕ್ಕೆಲ್ಲ ಸಿಗಲಿದೆ ನೆರವು?: ರೈತರು, ಭೂರಹಿತ ಕೃಷಿ ಕೂಲಿಕಾರರಿಗೆ ಹಾಗೂ ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಮೂಲಕ ಸ್ವಯಂ ಉದ್ಯೋಗ ಕಂಡುಕೊಳ್ಳುವವರಿಗೆ, ವೈಯಕ್ತಿಕ ಕಾಮಗಾರಿ, ಕೃಷಿ ಹೊಂಡ, ಕ್ಷೇತ್ರ ಬದು, ತೋಟಗಾರಿಕೆ ಬೆಳೆ, ರೇಷ್ಮೆ ಹಾಗೂ ಅರಣ್ಯ ಬೆಳೆ ಮತ್ತಿತರ ಕಾಮಗಾರಿ ನಡೆಸಬಹುದು. ಇನ್ನೊಂದೆಡೆ ತೋಟಗಾರಿಕೆ ಇಲಾಖೆ ವತಿಯಿಂದ ವೈಯಕ್ತಿಕ ಕಾಮಗಾರಿಗಳಿಗಾಗಿ ಸೌಲಭ್ಯ ಪಡೆಯಲು ಅರ್ಜಿಯನ್ನೂ ಆಹ್ವಾನಿಸಲಾಗುತ್ತದೆ.
ಉದ್ಯೋಗ ಪಡೆಯುವುದು ಹೇಗೆ?: ಮುಖ್ಯವಾಗಿ ರೈತರು ಉದ್ಯೋಗ ಚೀಟಿ ಹೊಂದಿರಬೇಕು, ಸ್ಥಳೀಯ ಗ್ರಾಪಂಗೆ ಭೇಟಿ ನೀಡಿ ನಮೂನೆ-1ನ್ನು ಭರ್ತಿ ಮಾಡಿ ಕುಟುಂಬದ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲಾ ಸದಸ್ಯರ ಇತ್ತೀಚಿನ ಭಾವಚಿತ್ರ, ವೈಯಕ್ತಿಕ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಜಾಬ್ ಕಾರ್ಡ್ ಪಡೆಯಬೇಕು. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ (ಊಟ್ಟಞ-6) ಗ್ರಾಪಂಗೆ ಬೇಡಿಕೆ ಸಲ್ಲಿಸಿ, ಸ್ವೀಕೃತಿ ಪಡೆಯಿರಿ ಅಥವಾ ಮನೆಯಲ್ಲಿಯೇ ಕುಳಿತು ಕಾಯಕ ಮಿತ್ರ ಮೊಬೈಲ್ ಆ್ಯಪ್ ಮೂಲಕವೂ ಅರ್ಜಿ ಸಲ್ಲಿಸಬಹುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಬರಪೀಡಿತ ಪ್ರದೇಶವಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 150 ಮಾನವ ದಿನ ಉದ್ಯೋಗ ಖಾತರಿ ನೀಡಲಾಗುತ್ತದೆ. ವೈಯಕ್ತಿಕ ಕಾಮಗಾರಿ ವೆಚ್ಚ 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ
. ● ಟಿ.ಕೆ.ರಮೇಶ್, ಜಿಪಂ ಉಪ ಕಾರ್ಯದರ್ಶಿ
ಉದ್ಯೋಗ ಚೀಟಿ ಹೊಂದಿದವರಿಗೆ 150 ದಿನಗಳ ಉದ್ಯೋಗ ಖಾತ್ರಿ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.
● ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ
– ಎಸ್.ಮಹೇಶ್