Advertisement

ನರೇಗಾ ಸಾಧನೆ; ಲೋಂಡಾ ಗ್ರಾಪಂ ತಾಲೂಕಿಗೆ ಪ್ರಥಮ

03:20 PM Apr 05, 2022 | Team Udayavani |

ಬೆಳಗಾವಿ: ಖಾನಾಪುರ ತಾಲೂಕಿನ ಲೋಂಡಾ ಗ್ರಾಮ ಪಂಚಾಯಿತಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 40,074 ಮಾನವ ದಿನಗಳನ್ನು ಸೃಜಿಸಿದ್ದು, ನಿಗದಿತ ಗುರಿಯ ಪೈಕಿ ಶೇ. 158.83 ಸಾಧನೆಗೈದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ ಎಂದು ಲೋಂಡಾ ಪಿಡಿಒ ಬಾಲರಾಜ್‌ ಭಜಂತ್ರಿ ತಿಳಿಸಿದರು.

Advertisement

ಲೋಂಡಾ ಗ್ರಾ.ಪಂ ಸಭಾಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರ್ಥಿಕ ವರ್ಷದಲ್ಲೂ ಲೋಂಡಾ ಗ್ರಾ.ಪಂ ತನ್ನ ವಾರ್ಷಿಕ ಗುರಿ 21,439 ಮಾನವ ದಿನಗಳ ಪೈಕಿ ಒಟ್ಟು 35,665 ಮಾನವ ದಿನಗಳನ್ನು ಸƒಜಿಸಿತ್ತು. ಈ ಭಾಗವನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಿದ್ದರಿಂದ ಕೂಲಿಕಾರರಿಗೆ ಪ್ರತಿ ವರ್ಷಕ್ಕೆ ಈ ಹಿಂದೆ ಇದ್ದ ಮಾನವದಿನಗಳನ್ನು 100ರಿಂದ 150ಕ್ಕೆ ಏರಿಸಿದ್ದು, ಇದರ ಪ್ರಯೋಜನವನ್ನು ಗ್ರಾಮದ 200 ಕೂಲಿಕಾರರು ಪಡೆದಿದ್ದಾರೆ ಎಂದರು.

ಪ್ರತಿ ಕೂಲಿಕಾರರಿಗೆ 299 ರೂ. ಕೂಲಿ ಪಾವತಿಸಲಾಗುತ್ತಿದೆ. ಗ್ರಾಮದಿಂದ 5 ಕಿ.ಮೀ. ಗಿಂತ ಹೆಚ್ಚಿನ ದೂರ ಕ್ರಮಿಸಿ ಕೆಲಸ ಮಾಡುವವರಿಗೆ 318 ರೂ. ಕೂಲಿ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ಕೆರೆ ಮತ್ತು ಕಾಲುವೆಗಳ ಹೂಳೆತ್ತಲಾಗಿದೆ. ಅರಣ್ಯದಲ್ಲಿ ಹೊಸ ಕೆರೆಗಳ, ಕೃಷಿ ಹೊಂಡ, ಬದು, ತೆರೆದ ಬಾವಿಗಳ ನಿರ್ಮಾಣ, ರೈತರ ಹೊಲಗಳಲ್ಲಿ ದನ ಹಾಗೂ ಕುರಿಗಳ ಕೊಟ್ಟಿಗೆ, ಹರಿಗಾಲುವೆ ಮತ್ತು ಹೊಲಗಾಲುವೆಗಳ ನಿರ್ಮಾಣ, ಮಣ್ಣು ಮತ್ತು ತೇವಾಂಶ ಸಂರಕ್ಷಣೆಯ ಕಾಮಗಾರಿಗಳು, ಸಾಮಾಜಿಕ ಅರಣ್ಯೀಕರಣ, ಕಾಡಿನ ಗಡಿಯಲ್ಲಿ ಕಂದಕ ನಿರ್ಮಾಣ (ಸಿಪಿಟಿ) ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ವರ್ಷ ಹೊಸದಾಗಿ 67 ಕುಟುಂಬಗಳು ಸೇರಿದಂತೆ ಗ್ರಾಪಂನಲ್ಲಿ ಒಟ್ಟು 822 ಕೂಲಿಕಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಶೇ. 70ರಷ್ಟು ಮಹಿಳಾ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮದಲ್ಲಿ ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಮತ್ತು ಅಧಿಕಾರಿಗಳು ಸಹಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಲೋಂಡಾ ಗ್ರಾ.ಪಂ ಅಧ್ಯಕ್ಷೆ ಶೆವರಿನ್‌ ಡಯಾಜ್‌ ಮಾತನಾಡಿ, ರಾಜ್ಯದ ಪ್ರಮುಖ ರೈಲ್ವೆ ಜಂಕ್ಷನ್‌ ಎಂದು ಲೋಂಡಾ ಗುರುತಿಸಿಕೊಂಡಿದೆ. ಇಲ್ಲಿ ಮುಂಚೆ ಇದ್ದ ಕೈಗಾರಿಕೆಗಳು ಮತ್ತು ಉದ್ಯಮಗಳು ಈಗ ಬಂದ್‌ ಆಗಿವೆ.

Advertisement

ಲಾಕ್‌ ಡೌನ್‌ ಸಂದರ್ಭದಲ್ಲಿ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಇಲ್ಲಿಯ ಜನರು ಕೆಲಸ ಕಳೆದುಕೊಂಡಿದ್ದರು. ಅವರನ್ನು ಶಿಕ್ಷಣ ಮತ್ತು ಸಂವಹನ ಚಟುವಟಿಕೆ (ಐಇಸಿ) ಮೂಲಕ ನರೇಗಾದತ್ತ ಆಕರ್ಷಿಸಲಾಗಿದೆ. ಯೋಜನೆಯ ಪ್ರಯೋಜನ ಕುರಿತು ಜನಜಾಗೃತಿ ಮೂಡಿಸಿದ್ದರಿಂದ ಇಂದು ಕೆಲ ಗ್ರಾ.ಪಂ ಸದಸ್ಯರೂ ಸೇರಿದಂತೆ ನೂರಾರು ಕೂಲಿಕಾರರು ಕೂಲಿ ಕೆಲಸಕ್ಕೆ ಹಾಜರಾಗಿ ಆಕರ್ಷಕ ಕೂಲಿ ಪಡೆದು ಆರ್ಥಿಕವಾಗಿ ಸಬಲರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಬಹುತೇಕ ಕೂಲಿಕಾರರು ಪದವಿ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್‌ ಪದವಿ, ಡಿಪ್ಲೊಮಾ ಓದಿದವರಿದ್ದಾರೆ. ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡ ಕುಶಲಕರ್ಮಿಗಳೂ ಇದ್ದಾರೆ ಎಂದರು.

ಗ್ರಾ.ಪಂ ಉಪಾಧ್ಯಕ್ಷ ಸಂದೀಪ್‌ ಸೋಜ್‌, ನೀಲಕಂಠ ಉಸಪಕರ, ಕುಮಾರ ಪಾಟೀಲ, ಊರ್ಮಿಳಾ ಮಿರಾಶಿ, ಸಂಜನಾ ಪಾಳೇಕರ, ವೈಶಾಲಿ ಕಾಂಬಳೆ, ವಿಲಾಸ ಮಾಂಗಳೇಕರ, ಶಿವಾನಂದ ಖೋತ, ಶಾಂತಾ ಖಂಡೋರೆ, ಯಶವಂತ ಗಾವಡೆ, ಯಲ್ಲಪ್ಪ ನಾಯಿಕ, ರಫೀಕ್‌ ಕಿತ್ತೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next