ದೋಟಿಹಾಳ: ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸಲು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ ಭಾಗವಹಿಸಿ ನೀವು ಕೆಲಸ ಮಾಡಿ ಕೂಲಿ ಪಡೆಯಬೇಕು ಎಂದು ಬಿಜಕಲ್ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕೆ.ಬೋದೂರು ತಾಂಡಾದಲ್ಲಿ ಇರುವ 5 ಜನ ಲಿಂಗತ್ವ ಅಲ್ಪ ಸಂಖ್ಯಾತರ ಮನೆಗೆ ಗುರುವಾರ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಭೇಟಿ ನೀಡಿ ನರೇಗಾ ಯೋಜನೆಯ ವಿಶೇಷ ವರ್ಗದ ಜಾಬಕಾರ್ಡ ನೀಡಿದರು.
ಈ ವೇಳೆ ಮಾತನಾಡಿದ ಅವರು, ಲಿಂಗತ್ವ ಅಲ್ಪ ಸಂಖ್ಯಾತರು ಕೂಡಾ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಇತ್ತಿಚ್ಚೀಗೆ ಶಿಕ್ಷಕರ ನೇಮಕಾತಿಯಲ್ಲಿ ಮೂರ ಜನ ಲಿಂಗತ್ವ ಅಲ್ಪ ಸಂಖ್ಯಾತರು ಆಯ್ಕೆಯಾಗಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಮಾಡಿದಾಗ ಈ ತಾಂಡದಲ್ಲಿ 5 ಜನ ಲಿಂಗತ್ವ ಅಲ್ಪ ಸಂಖ್ಯಾತರ ಮನೆಗಳು ಇರುವುದು ತಿಳಿದು, ಇವರಿಗೂ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿ ಇವರಿಗೂ ಬಿಜಕಲ್ ಗ್ರಾ.ಪಂ.ನಿಂದ ನರೇಗಾ ಜಾಬ್ ಕಾರ್ಡ್ ನೀಡಲಾಯಿತು.
ಈಗಾಗಲೇ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಶರಣಮ್ಮ ನರೇಗಾದಡಿ ಕೆಲಸ ನಿರ್ವಹಿಸಿ ಗೌರವಯುತ ಬದುಕು ಸಾಗಿಸಿ ರಾಜ್ಯದಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾದರಿಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
ನರೇಗಾ ಯೋಜನೆ ಜಾರಿಯಾಗಿ 16 ವರ್ಷಗಳಾದರೂ ಲಿಂಗತ್ವ ಅಲ್ಪಸಂಖ್ಯಾತರು ಯೋಜನೆಯಲ್ಲಿ ಪಾಲ್ಗೊಂಡಿರುವುದಿಲ್ಲ. ವಿಶೇಷ ಆದ್ಯತೆ ನೀಡಿ ಕುಷ್ಟಗಿ ತಾಲೂಕಿನಲ್ಲಿ ಸಮೀಕ್ಷೆ ಕೈಗೊಳ್ಳುವುದರ ಮೂಲಕ ಕ್ರಮವಹಿಸಲಾಗುತ್ತಿದೆ ಎಂದರು. ಯೋಜನೆಯಲ್ಲಿ ಭಾಗಿಯಾಗುವದರಿಂದ ಒಬ್ಬರಿಗೆ 100 ದಿನಗಳ ಕೂಲಿ ಕೆಲಸದಿಂದ ರೂ.30900/- ಕೂಲಿ ಹಣ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದರು.
ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಅವರು ಮಾತನಾಡಿ, ನರೇಗಾ ಯೋಜನೆಯಡಿ ಕೂಲಿ ಕೆಲಸ, ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳ ಕುರಿತು ಮಾಹಿತಿ ನೀಡಿ ಕೆಲಸಕ್ಕೆ ಬರುವಂತೆ ಮನವೋಲಿಸಿದರು.
ಈ ವೇಳೆ ತಾಲೂಕು ಪಂಚಾಯತ್ ನ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಬಸವರಾಜ, ಬಿಜಕಲ್ ಗ್ರಾಪಂ ಪಿಡಿಒ ನಾಗೇಶ್ ಅರಳಿಗನೂರು, ಗ್ರಾ.ಪಂ ಸದಸ್ಯರಾದ ಯಮನಪ್ಪ ರಾಠೋಡ್, ಗ್ರಾಮ ಕಾಯಕ ಮಿತ್ರ ಸ್ವಾತಿ ಮಾಲಿಪಾಟೀಲ್, ಕಾಯಕ ಬಂಧು ಅಮರೇಶ ರಾಠೋಡ್, 05 ಜನ ಲಿಂಗತ್ವ ಅಲ್ಪಸಂಖ್ಯಾತರು ಇದ್ದರು.