ಮಾಗಡಿ: ಗ್ರಾಮೀಣ ಯುವ ಜನರು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಿ, ಗ್ರಾಮದಲ್ಲೇ ಉಳಿಸಿ ಆರ್ಥಿಕವಾಗಿ ಸದೃಢಗೊಳಿಸಬೇಕು ಎಂಬ ಉದ್ದೇಶದಿಂದ ನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಪಂ ಅಧ್ಯಕ್ಷೆ ಶೋಭಾ ಗಂಗರಾಜು ತಿಳಿಸಿದರು.
ತಾಲೂಕಿನ ಅಜ್ಜನಹಳ್ಳಿ ಗ್ರಾಪಂನಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಮೊದಲ ಗ್ರಾಮ ಸಭೆಯಲ್ಲಿ ಮಾತನಾಡಿ, ಗ್ರಾಮೀಣರು ನಗರ ಪ್ರದೇಶಕ್ಕೆ ವಲಸೆ ಹೋಗಿ ಉತ್ತಮ ಬದುಕಿಗಾಗಿ ಪರಿತಪ್ಪಿಸುವುದು ಬೇಡ. ಪೂರ್ವಿಕರು ನಿಮಗಾಗಿ ಉಳಿಸಿರುವ ಜಮೀನಿನಲ್ಲಿ ಸರ್ಕಾರ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿ, ಆರ್ಥಿಕವಾಗಿ ಸದೃಢರಾಗುವಂತೆ ಸಲಹೆ ನೀಡಿದರು.
ತಾಪಂ ಸದಸ್ಯ ಎ.ಎಲ್.ಶಂಕರ್ ಮಾತನಾಡಿ, ನರೇಗಾ ಗ್ರಾಮೀಣ ಭಾಗದ ಜನರಿಗೆ ವರದಾನ. ಸಮುದಾಯ ಮತ್ತು ವೈಯಕ್ತಿಕವಾಗಿಯೂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬಿಗಳಾಗಬಹುದು. ಇದಕ್ಕಾಗಿ ಗ್ರಾಪಂನಲ್ಲಿ ಕಡ್ಡಾಯ ಜಾಬ್ ಕಾರ್ಡ್ ಪಡೆದು ನೂರು ದಿನಕೂಲಿ ಪಡೆಯಬಹುದು. ಇದರಿಂದ ಕನಿಷ್ಠ ಒಂದು ಕುಟುಂಬಕ್ಕೆ 24 ಸಾವಿರ ರೂ. ಹಣ ಸಿಗಲಿದೆ. ಜೊತೆಗೆ ತಮ್ಮ ಜಮೀನನ್ನು ಅಭಿವೃದ್ಧಿಪಡಿಸಿಕೊಳ್ಳುವ ಎಲ್ಲ ಅವಕಾಶಗಳಿವೆ ಎಂದು ತಿಳಿಸಿದರು.
ಪಿಡಿಒ ಗಂಗಯ್ಯ ಮಾತನಾಡಿ, ಅಜ್ಜನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 91 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ 25 ಸಾಮೂಹಿಕ ಮತ್ತು 65 ವೈಯಕ್ತಿಕ ಕಾಮಗಾರಿ ಹಮ್ಮಿಕೊಂಡಿದ್ದು, ಒಟ್ಟು 35 ಲಕ್ಷದ 44 ಸಾವಿರದ 763 ರೂ ಹಣವನ್ನು ಖರ್ಚು ಮಾಡ ಲಾಗಿದೆ. ಒಂದು ಕೋಟಿವರೆವಿಗೂ ಕಾಮಗಾರಿ ಕೈಗೊಳ್ಳುವ ಅವಕಾಶವಿದ್ದು, ಗ್ರಾಮೀಣ ಜನತೆ ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕೆಂದು ಮನವಿ ಮಾಡಿ ಕೋರಿದರು.
ಬಹುತೇಕ ಮಂದಿ ರೈತರು ತಾವು ಈಗಾಗಲೇ ಕಟ್ಟಿಕೊಂಡಿರುವ ದನದ ಕೊಟ್ಟಿಗೆ 2ನೇ ಬಿಲ್ ಕಳೆದ 3 ವರ್ಷಗಳಿಂದಲೂ ಪಾವತಿಸಿಲ್ಲ. ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯ ತೋರಿರುವುದರಿಂದ ರೈತರು ಸಾಲದ ಸೂಲೆಗೆ ತಲುಪಬೇಕಾಗಿದೆ. ಬಡ್ಡಿ ಕಟ್ಟಲಾಗದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಬಿಲ್ ವಿಳಂಬಕ್ಕೆ ಕಾರಣ ಕೊಡುವಂತೆ ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು. ಇನ್ನಾದರೂ ತಮ್ಮಗೆ ನೀಡಬೇಕಾದ ಪೂರ್ಣ ಬಿಲ್ ಪಾವತಿಸಿ ಎಂದು ಮನವಿ ಮಾಡಿದರು.
ಸಾಮಾಜಿಕ ಲೆಕ್ಕ ಪರಿಶೋಧಕ ತಾಲೂಕು ಸಂಯೋಜಕ ನಾಗರಾಜು, ಗ್ರಾಪಂನಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಬಹುತೇಕ ಸಹಿ,ಪೋಟೊ ಸೇರಿದಂತೆ ಹಲವು ಲೋಪದೋಷಗಳನ್ನು ತಿಳಿಸಿದರು. ಇವುಗಳಿಗೆ ಪಿಡಿಒಗಳು ಉತ್ತರಿಸಿದರೆ ಅನುಮೋದನೆ ಸಿಗಲಿದೆ ಎಂದು ತಿಳಿಸಿದರು.
ಕೃಷಿ ಅಧಿಕಾರಿ ಅಶೋಕ್, ತೋಟಗಾರಿಕೆ ಅಧಿಕಾರಿ ಚಂದ್ರಿಕಾ,ರೇಷ್ಮೆ ಇಲಾಖೆಯ ಶಿವರಾಜು, ಸಾಮಾಜಿಕ ವಲಯ ಅರಣ್ಯಾಧಿಕಾರಿ ಆಶಾ, ಪಶು ಚಿಕಿತ್ಸಾ ಕೇಂದ್ರದ ಡಾ. ಕಾವ್ಯಶ್ರೀ, ಸಿಡಿಪಿಓ ಇಲಾಖೆಯ ಜಯಲಕ್ಷ್ಮೀ ಇತರೆ ಇಲಾಖೆ ಅಧಿಕಾರಿಗಳು ಇಲಾಖಾವಾರು ಸೌಲತ್ತುಗಳ ಕುರಿತು ಮಾಹಿತಿ ನೀಡಿದರು.
ಅಜ್ಜನಹಳ್ಳಿ ಗ್ರಾಪಂ ಉಪಾಧ್ಯಕ್ಷ ಚಿಕ್ಕಣ್ಣ, ಸದಸ್ಯರಾದ ಚಿದಾನಂದ್,ಕುಮಾರ್ (ಧನಂಜಯ), ಆರ್.ಶಿವಣ್ಣ, ಪುಟ್ಟಲಕ್ಷ್ಮಮ್ಮ, ಪ್ರಸನ್ನಕುಮಾರ್, ಸಾಮಾಜಿಕ ಕಾರ್ಯಕರ್ತ ಗಂಗರಾಜು, ಮಹೇಶ್,ನಾಗರಾಜು, ಲಕ್ಷ್ಮೀ ದೇವಮ್ಮ, ಮುಖ್ಯಶಿಕ್ಷಕ ಶಿವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಆಧ್ಯಕ್ಷ ಜಿ.ಪ್ರಕಾಶ್, ವೀರಭದ್ರಪ್ಪ, ಕದರೇಗೌಡ, ಕೃಷ್ಣಮೂರ್ತಿ ಗ್ರಾಪಂ ಕಾರ್ಯದರ್ಶಿ ಡಿ.ಎನ್.ಶಿವಸ್ವಾಮಿ ಇದ್ದರು.