ಆಳಂದ: ಕೊಡಲಹಂಗರಗಾ ಗ್ರಾಮ ಪಂಚಾಯತ್ ಉದ್ಯೋಗ ಖಾತ್ರಿ ಕಾಮಗಾರಿ ಮೂಲಕ ಲಾಕ್ ಡೌನ್‌ದಂತ ಸಂಕಷ್ಟದ ಸಮಯದಲ್ಲೂ ಕಾಮಗಾರಿ ಹಮ್ಮಿಕೊಂಡು ದುಡಿಯುವ ವರ್ಗಕ್ಕೆ ಖುಷಿ ಕೊಟ್ಟಿದೆ. ಹೊರಾಟಗಾರರ ಊರು ಇದಾಗಿದೆ. ಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಅರುಣಕುಮಾರ ಪಾಟೀಲ, ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಕೊರಳ್ಳಿ, ಕರವೇ ನಿಕಟಪೂರ್ವ ಅಧ್ಯಕ್ಷರಾದ ಕಿರಣಕುಮಾರ ಗುತ್ತೇದಾರ, ಲಕ್ಷ್ಮಿಕಾಂತ ಉದ್ದನೂರ, ಮಲ್ಲಿನಾಥ ಸಾವಳಗಿ ಹೀಗೆ ಹೋರಾಟಗಾರರಿಂದಲೇ ಈ ಗ್ರಾಮ ಗಮನ ಸೆಳೆದಿದೆ.
ಈ ಸಂಘಟನೆಗಳ ಮುಖಂಡರು ತಮ್ಮ ಊರಿಗಷ್ಟೇ ಅಲ್ಲ, ತಾಲೂಕು, ಜಿಲ್ಲೆ ಸೇರಿದಂತೆ ನಾಡು-ನುಡಿ ವಿಷಯದಲ್ಲೂ ಸದಾಕಾಲ ಧ್ವನಿ ಎತ್ತುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕಲಬುರಗಿ ವಿವಿಯಲ್ಲಿ ಸಾಮಜ ಕಾರ್ಯ ವಿಭಾಗದ ಮುಖ್ಯಸ್ಥ ಕೆ.ಎಸ್. ಮಾಲಿಪಾಟೀಲ, ರಾಜಕೀಯ ಮತ್ಸದ್ಧಿ ಚಂದುರಾವ್ ಕುಲಕರ್ಣಿ ಹೀಗೆ ಶಿಕ್ಷಣವಂತರು, ಶ್ರಮಜೀವಿಗಳು, ವೈದ್ಯರು, ವಕೀಲರು, ಕೃಷಿ ಪರಿಣತರ ಊರು ಇದಾಗಿದೆ. ಅಲ್ಲದೇ ಗ್ರಾಪಂ ಕೇಂದ್ರಸ್ಥಾನ ಮಂಚೂಣಿಯೇ ಕೊಡಲಹಂಗರಗಾ. ಈ ಗ್ರಾಮ ವಾಗªರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯ ಕಲಬುರಗಿ ಆಳಂದ (ಆಳಂದದಿಂದ 7 ಕಿ.ಮೀ ಅಂತರ) ಮಾರ್ಗದಲ್ಲಿ ಬರುತ್ತದೆ.
ಕೊಡಲಹಂಗರಗಾ ಗ್ರಾಪಂ ವ್ಯಾಪ್ತಿಗೆ ಎಲೆನಾವದಗಿ, ಎಲೆನಾವದಿ ತಾಂಡಾ, ಕೊಡಲಹಂಗರಗಾ ತಾಂಡಾ ಸೇರಿ ಒಟ್ಟು ಸುಮಾರು ಎಂಟು ಸಾವಿರ ಜನಸಂಖ್ಯೆ ಮತ್ತು ಸುಮಾರು 1563 ಮಂದಿ ಕಾರ್ಮಿಕರು ಇದ್ದಾರೆ. ಕೋವಿಡ್‌ನಂತ ಮಹಾಸಂಕಷ್ಟ ಹಾಗೂ ಲಾಕ್‌ಡೌನ್ ನಡುವೆಯೂ ಸರ್ಕಾರಿ ನಿಯಮಾವಳಿಯಂತೆ ಪ್ರಸಕ್ತ ಸಾಲಿನ ಮಹಾತ್ಮಾ ಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಕೂಲಿಕಾರರ ಪೈಕಿ ಸುಮಾರು 1243 ಮಂದಿಗೆ ಯೋಜನೆಯ 100 ದಿನಗಳ ಕೆಲಸದಲ್ಲಿ ಶೇ. 60ರಷ್ಟು ದಿನದ ಕೆಲಸ ದೊರೆತು ಕೂಲಿ ಕೈಸೇರಿದೆ.
ಒಟ್ಟು ಇದುವರೆಗೂ 18900 ಮಾನವದಿನಗಳಾಗಿ, ಸುಮಾರು 52 ಲಕ್ಷ ರೂ. ಕೂಲಿ ಹಣ ಕಾರ್ಮಿಕರಿಗೆ ಲಭಿಸಿದೆ. ಕೆರೆ, ಗೋಕಟ್ಟೆ, ನಾಲಾ ಹೂಳೆತ್ತುವುದು, ಹೊಲದ ಬದು ನಿರ್ಮಾಣದಂತ ಹಲವು ಕಾಮಗಾರಿಗಳಿಂದ ದುಡಿಯುವ ವರ್ಗಕ್ಕೆ ಖುಷಿತಂದಿದೆ. ಶಾಸಕ ಸುಭಾಷ ಗುತ್ತೇದಾರ ಬೆಂಬಲಿತ ಗ್ರಾಪಂ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರ ದೊಂದಿಗೆ ಪ್ರತಿಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾರ್ವಜನಿಕ ಕೆಲಸದ ಜೊತೆಗೆ ಕೂಲಿ ಕಾರ್ಮಿಕರಿಗೆ ಕೆಲಸ ಹಾಗೂ ತಕ್ಷಣಕ್ಕೆ ಕೂಲಿ ಹಣ ಒದಗಿಸಿದ ಶ್ರೇಯಸ್ಸು ಈ ಗ್ರಾಮಕ್ಕಿದೆ.
ಕಾಮಗಾರಿಯಲ್ಲಿ ಪಿಯುಸಿಯಿಂದ ಪದವಿ ವರೆಗೆ ಓದಿದ 15 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಸರ್ಕಾರದ ನಿಯಮದಂತೆ 60 ವರ್ಷ ಮೇಲ್ಪಟ್ಟವರಿಗೆ ಶೇ. 50ರಷ್ಟು ಮಾತ್ರ ಕೆಲಸ ನೀಡಿ, ಸಂಪೂರ್ಣ ಕೂಲಿ ನೀಡಲಾಗಿದೆ. ಒಬ್ಬ ಕಾರ್ಮಿಕನಿಗೆ ದಿನಕ್ಕೆ ಹೆಣ್ಣು-ಗಂಡಿಗೆ ಸಮನಾಗಿ 289 ರೂ. ಸೇರಿದಂತೆ ಒಟ್ಟು ಒಂದು ಕುಟುಂಬಕ್ಕೆ 100 ದಿನದ ಕೆಲಸ ನೀಡಿದ್ದರ ಪೈಕಿ ಶೇ. 60ಷ್ಟು ಕೂಲಿ ಕೆಲಸ ಮಾಡಲಾಗಿದೆ.
ಸಾಕಷ್ಟು ಜನ ಗುಳೆ ಹೋಗಿ ಬಂದ ಮಹಿಳೆಯರು, ಪುರುಷರಿಗೆ ಸುಮಾರು 40 ಮಂದಿ ಅರ್ಜಿ ಸಲ್ಲಿಸಿದ ಮರುದಿನವೇ ಕೆಲಸ ಒದಗಿಸಿ ದುಡಿದ ಎಲ್ಲ ಕಾರ್ಮಿಕರಿಗೆ ಯಾವುದೇ ಬಾಕಿ ಇಟ್ಟುಕೊಳ್ಳದೇ ಕೂಲಿ ಪಾವತಿಸಲಾಗಿದೆ. ಈಗ ಮಳೆಗಾಲ ಆರಂಭವಾಗಿದ್ದರಿಂದ ನಿರೀಕ್ಷಿತ ಗುರಿ ಮುಟ್ಟಲು ಅಡ್ಡಿಯಾಗಬಹುದು. ಈ ನಡುವೆಯೂ ಗ್ರಾಪಂ ಆಡಳಿತ ಮಂಡಳಿ ನೆಲ, ಜಲ ಕೆಲಸದ ಹೊಸ ದಿಕ್ಸೂಚಿಯತ್ತ ಹೆಜ್ಜೆಯನಿಟ್ಟು ಮಾದರಿ ಗ್ರಾಪಂ ಆಗುವ ಕನಸು ಕಂಡಿದೆ.