Advertisement

ಬಡ ಕೂಲಿಕಾರ್ಮಿಕರಿಗೆ ವರದಾನವಾದ ನರೇಗಾ

12:24 PM Apr 30, 2020 | Suhan S |

ಕಲಘಟಗಿ: ಲಾಕ್‌ಡೌನ್‌ ಕಾರಣ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರಿಗೆ ನರೇಗಾ ಕಾಮಗಾರಿ ಜೀವನೋಪಾಯಕ್ಕೆ ಎಡೆಮಾಡಿಕೊಟ್ಟಿದ್ದು, ಗಲಗಿನಗಟ್ಟಿ ಗ್ರಾಮದ ಬಡಿಕಟ್ಟಿ ಕೆರೆ ಹೂಳೆತ್ತುವ ಕಾರ್ಯದಲ್ಲಿ ಕೂಲಿ ಕಾರ್ಮಿಕರು ನಿರತರಾಗಿದ್ದಾರೆ.

Advertisement

ದಿನದ ದುಡಿಮೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಕೂಲಿಕಾರ್ಮಿಕ ಕುಟುಂಬಗಳು ಹುಬ್ಬಳ್ಳಿಯ ಕೂಲಿಯನ್ನೇ ನೆಚ್ಚಿಕೊಂಡು ಬಾಳು ನಡೆಸುತ್ತಿದ್ದರು. ಲಾಕ್‌ಡೌನ್‌ ಘೋಷಣೆ ಬಳಿಕ ಕೆಲಸವಿಲ್ಲದೆ ಅರೆಹೊಟ್ಟೆಯಲ್ಲಿ ಕಾಲ ಕಳೆಯುತ್ತಿದ್ದ ಜನತೆಗೆ ನರೇಗಾ ನೆರವಾಗುತ್ತಿದೆ. ಕೆರೆ ಹೂಳೆತ್ತುವುದು, ಕಾಲುವೆ ನಿರ್ಮಾಣ, ಅರಣ್ಯೀಕರಣ, ಕೃಷಿ ಹೊಂಡ, ದನದ ಕೊಟ್ಟಿಗೆ ಸೇರಿ ಒಟ್ಟು 6.91 ಲಕ್ಷ ಮಾನವ ದಿನಗಳು ಮಂಜೂರಾಗಿದ್ದು, ಇದರಲ್ಲಿ ಈಗಾಗಲೇ 10 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ತಾಪಂ ಇಒ ಎಂ.ಎಸ್‌. ಮೇಟಿ ಮಾಧ್ಯಮಕ್ಕೆ ತಿಳಿಸಿದರು.

ದೇವಿಕೊಪ್ಪ, ಜಿನ್ನೂರ, ಗಳಗಿಹುಲಕೊಪ್ಪ, ಜಿ.ಬಸವನಕೊಪ್ಪ ಸೇರಿದಂತೆ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಾವಿರಾರು ಕೂಲಿ ಕಾರ್ಮಿಕರು ಉದ್ಯೋಗದಲ್ಲಿ ನಿರತರಾಗಿದ್ದಾರೆ. ಉದ್ಯೋಗದಲ್ಲಿ ನಿರತರಾದವರಿಗೆ ಒಂದು ಜಾಬ್‌ ಕಾರ್ಡ್‌ಗೆ 100 ಮಾನವ ದಿನಗಳಿದ್ದು, ಒಂದು ದಿನದ ಕೂಲಿ 275 ಹಾಗೂ 10 ಸಾಮಗ್ರಿ ವೆಚ್ಚ ಸೇರಿ 285 ರೂ. ಪಾವತಿಸಲಾಗುತ್ತದೆ. ಜನರು ತಮ್ಮ ಗ್ರಾಪಂಗಳಿಗೆ ಭೇಟಿ ನೀಡಿ ಕೆಲಸ ಪಡೆಯಬಹುದು ಎಂದು ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ತಿಳಿಸಿದರು

ತಾಪಂ ಇಒ ಎಂ.ಎಸ್‌. ಮೇಟಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಪಿಡಿಒ ಚನ್ನಮಲ್ಲಪ್ಪ ಉಳ್ಳಾಗಡ್ಡಿ, ಗ್ರಾಪಂ ಅಧ್ಯಕ್ಷೆ ಚನ್ನವ್ವ ಆಲದಮರದ, ಉಪಾಧ್ಯಕ್ಷೆ ಈರವ್ವ ಬೇಗೂರ ಮುಂತಾದವರು ಕಾರ್ಯನಿರತ ಕಾರ್ಮಿಕರಿಗೆಲ್ಲಾ ಉಚಿತವಾಗಿ ಮಾಸ್ಕ್ಗಳನ್ನು ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next