Advertisement
ಹೌದು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇನಂದಿಹಾಳ ಗ್ರಾಮ ಪಂಚಾಯತಿಯ ಹಿರೇನಂದಿಹಾಳ ಗ್ರಾಮದ ಯಲ್ಲಪ್ಪ ರಾಮಣ್ಣ ಕರಡಿ ಎನ್ನುವವರೇ ಹ್ಯಾನ್ಸನ್ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ. ತನಗಿರುವ ಖಾಯಿಲೆಯನ್ನು ಲೆಕ್ಕಿಸದೇ, 2019 ರಿಂದ ಕೆರೆ, ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿರುವ ಅವರ ಛಲ ಮೆಚ್ಚುವಂತದ್ದು. ದುಡಿಯೋಣ ಬಾ ಅಭಿಯಾನದಲ್ಲಿ ನಿರಂತರವಾಗಿ 90 ದಿನಗಳ ಕಾಲ ಕೂಲಿ ಕೆಲಸವನ್ನು ಮಾಡುವ ಮೂಲಕ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಂಡು, ತಮ್ಮ ಖಾಯಿಲೆಯ ಖಿನ್ನತೆಯಿಂದ ಹೊರಬಂದಿದ್ದಾರೆ.
Related Articles
Advertisement
ಪ್ರತಿ ದಿನ ಜೀವನದ ಹೊಟ್ಟೆಪಾಡಿಗಾಗಿ ಹಾಗೂ ಮಹಾಮಾರಿ ರೋಗದ ಸಲುವಾಗಿ ದವಾಖಾನೆ ಖರ್ಚು ಭರಿಸಲು ಯಲ್ಲಪ್ಪನ ಯೋಚನೆಗೆ ಬಂದಿದ್ದೇ ನರೇಗಾ ಯೋಜನೆ. ಕಳೆದ 3 ವರ್ಷಗಳಿಂದ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಮಹಾಮಾರಿ ರೋಗಕ್ಕೆ ಎದೆಗುಂದದೇ ಕೂಲಿ ಕೆಲಸಕ್ಕೆ ಹಾಜರಾಗಿ ಜೀವನ ಸಾಗಿಸಬೇಕೆನ್ನುವ ಛಲ ಹೊಂದಿರುವಂತಹ ನನ್ನಂತವರಿಗೆ ಉದ್ಯೋಗ ಖಾತ್ರಿ ಯೋಜನೆಯು ಆಸರೆಯಾಗಿರುವುದು ನಿಜಕ್ಕೂ ಸತ್ಯ. ದುಡಿಯೋಣ ಬಾ ಅಭಿಯಾನದಡಿ ಕೆಲಸ ನೀಡಿರುವುದರಿಂದ ನನಗೆ ಬಹಳ ಸಹಕಾರಿಯಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಯಲ್ಲಪ್ಪ.
ಒಪ್ಪತ್ತಿನ ಊಟಕ್ಕೆ ಅನುಕೂಲ :
ಕಾಯಿಲೆ ಇರುವುದರಿಂದ ನನ್ನನ್ನು ಕುಟುಂಬ ದೂರ ಮಾಡಿದ್ರು, ಉದ್ಯೋಗ ಖಾತ್ರಿ ಮಾತ್ರ ನನ್ನ ಕೈಬಿಡಲಿಲ್ಲ. ಇರೊಷ್ಟು ದಿನ ಯೋಜನೆಯಡಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತೇನೆ. ಇದರಿಂದ ಒಪ್ಪತ್ತಿನ ಊಟಕ್ಕೆ ಅನುಕೂಲ ಆಗೈತ್ರಿ ಅಂತಾರೆ ಯಲ್ಲಪ್ಪ ಕರಡಿ.
ಮಹಾಮಾರಿ ರೋಗದಿಂದ ಬೇಸತ್ತಿದ್ದ ಯಲ್ಲಪ್ಪ ತಾನು ಕೂಡಾ ಇತರರಂತೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸಬೇಕು ಎನ್ನುವ ಉದ್ದೇಶದಿಂದ ಯೋಜನೆಯಲ್ಲಿ ಭಾಗವಹಿಸಿರುವುದಕ್ಕೆ ನರೇಗಾ ಕೂಲಿ ಹಣ ಅನುಕೂಲವಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕೈ ಹಿಡಿದಿರುವುದು ಯೋಜನೆಯು ಸಾರ್ಥಕವಾಗಿದ್ದು, ಯಲ್ಲಪ್ಪ ಕರಡಿ ಇತರರಿಗೆ ಮಾದರಿಯಾಗಿದ್ದಾರೆ. -ಶ್ರೀ.ಶಿವಪ್ಪ ಸುಬೇದಾರ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್, ಕುಷ್ಟಗಿ
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಇಂತಹ ವ್ಯಕ್ತಿಗಳನ್ನು ಹುಡುಕಿ ಕೆಲಸ ನೀಡುತ್ತಿರುವುದು ಶ್ಲಾಘನೀಯ. ಇಂತವರು ಮನೆಯಲ್ಲಿ ಕುಳಿತುಕೊಳ್ಳದೇ ದುಡಿಯೋಣ ಬಾ ಅಭಿಯಾನದಲ್ಲಿ ಭಾಗವಹಿಸಬೇಕಿದೆ. ಜಿಲ್ಲೆಯಲ್ಲಿ ಇಂತವರಿದ್ದರೆ ಅವರಿಗೆ ಆದ್ಯತೆಯಾಗಿ ಕೆಲಸ ನೀಡಲು ಸೂಚಿಸಲಾಗಿದೆ. -ಬಿ.ಫೌಜಿಯಾ ತರನ್ನುಮ್ , ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ
-ಮಂಜುನಾಥ ಮಹಾಲಿಂಗಪುರ ( ಕುಷ್ಟಗಿ)