ಕಲಘಟಗಿ: ಕೋವಿಡ್ ಲಾಕ್‌ಡೌನ್ ಪರಿಣಾಮ ಕೆಲಸವಿಲ್ಲದೆ ಬಸವಳಿದ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿದಿದೆ. ದಿನದ ದುಡಿಮೆಯನ್ನೇ ನಂಬಿಕೊಂಡಿದ್ದ ಅದೆಷ್ಟೋ ಕೂಲಿ ಕಾರ್ಮಿಕ ಕುಟುಂಬಗಳು ಹುಬ್ಬಳ್ಳಿ ಸೇರಿದಂತೆ ನಗರ ಪ್ರದೇಶದ ಕೂಲಿಯನ್ನೇ ನೆಚ್ಚಿಕೊಂಡಿದ್ದರು. ಇವರ ಬಾಳನ್ನು ಕೋವಿಡ್ ಕಮರಿಸಿದಾಗ ಆಸರೆಯಾಗಿದ್ದೇ ನರೇಗಾ.
ತಾಪಂ ಇಒ ಎಂ.ಎಸ್. ಮೇಟಿ ಮಾರ್ಗದರ್ಶನದಲ್ಲಿ ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಬಹುತೇಕ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗೆ ಚಾಲನೆ ದೊರಕಿಸಿದರು. ಸ್ವಸ್ಥಳದಲ್ಲಿಯೇ ಕಾರ್ಮಿಕರಿಗೆ ಕೂಲಿ ಸಿಗುವಂತಾಯಿತು.
ಹೊಸಕೆರೆ ನಿರ್ಮಾಣ: ಸಂಗಮೇಶ್ವರ ಗ್ರಾಪಂ ವ್ಯಾಪ್ತಿಯ ಹೊಸಕೆರೆ ನಿರ್ಮಾಣ ಕಾಮಗಾರಿಗೆ ಅಂದಾಜು 9.90 ಲಕ್ಷ ರೂ. ಗಳ ಕ್ರಿಯಾ ಯೋಜನೆ ತಯಾರಿಸಲಾಗಿದ್ದು, ಸುಮಾರು 460 ಕೂಲಿಕಾರರು ಕೆಲಸ ಮಾಡುತ್ತಿರುವುದು ನೋಡುಗರ ಕಣ್ಮನ ಸೆಳೆಯುತ್ತಿದೆ. ಚಂದ್ರು ಅವರು ಮುತುವರ್ಜಿ ವಹಿಸಿ ಕಾಯಕ ಸಂಘವನ್ನು ರಚಿಸಿ, 20 ಜನರಿಗೆ ಒಬ್ಬರಂತೆ ಉದ್ಯೋಗ ಮಿತ್ರರನ್ನು ನೇಮಕ ಮಾಡಿ ಕಾಮಗಾರಿಗೆ ವೇಗ ನೀಡಿದ್ದಾರೆ. ತಾಂತ್ರಿಕ ಸಹಾಯಕ ಭೀಮಸೇನ ಕುಲಕರ್ಣಿ, ಪಿಡಿಒ ಸುಭಾಷ ಮೇಟಿ ಮತ್ತು ಸಿಬ್ಬಂದಿ ಸಾಥ್ ನೀಡಿದ್ದಾರೆ.
6.91 ಲಕ್ಷ ಮಾನವ ದಿನ: ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳಿಗಾಗಿ ತಾಲೂಕಿಗೆ ಒಟ್ಟು 6.91 ಲಕ್ಷ ಮಾನವ ದಿನಗಳು ಮಂಜೂರಾಗಿವೆ. ಜೂನ್ ಅಂತ್ಯದ ವರೆಗೆ 1,24,124 ಮಾನವ ದಿನಗಳ ಗುರಿ ನಿಗದಿ ಪಡಿಸಲಾಗಿತ್ತು. ಆದರೆ ಜೂ. 18ರ ಅಂಕಿಅಂಶದ ಪ್ರಕಾರ 1,32,429 ಮಾನವ ದಿನಗಳನ್ನು ಸೃಜಿಸಿದ ಹೆಮ್ಮೆಯಿದೆ ಎಂದು ತಾಪಂ ಇಒ ಎಂ.ಎಸ್. ಮೇಟಿ ತಿಳಿಸಿದ್ದಾರೆ.
ಉದ್ಯೋಗ ನಿರತರ ಒಂದು ಜಾಬ್ ಕಾರ್ಡ್‌ಗೆ 100 ಮಾನವ ದಿನಗಳಿದ್ದು, ಒಂದು ದಿನದ ಕೂಲಿ 285 ರೂ. ಪಾವತಿಸಲಾಗುತ್ತದೆ. ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳು ನಡೆಯುತ್ತಿದ್ದು, ನಿತ್ಯ ಸುಮಾರು 2,300ಕ್ಕೂ ಮಿಕ್ಕಿದ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿಯಡಿ ಕೆಲಸದಲ್ಲಿ ನಿರತರಾಗಿದ್ದಾರೆ.
ನಗರ ಪ್ರದೇಶಗಳಿಂದ ತಿರುಗಿ ಬಂದು ಇಲ್ಲಿಯೇ ವಾಸ್ತವ್ಯ ಹೂಡಿರುವ ಕೂಲಿಕಾರ್ಮಿಕರಿಗೆ ಹಾಗೂ ಬಡ ರೈತರಿಗೂ ಕೆಲಸ ನೀಡಲು ನರೇಗಾದಡಿ ಅವಕಾಶವಿದೆ. ಹೊಸ ಜಾಬ್‌ಕಾರ್ಡ್‌ಗಳನ್ನು ತಕ್ಷಣ ನಿರ್ಮಿಸಿ ಕೆಲಸ ನೀಡಲಾಗುವುದು. ಯೋಜನೆ ಸದುಪಯೋಗಕ್ಕೆ ಗ್ರಾಮೀಣ ಜನರು ಮುಂದಾಗಬೇಕು.
–ಚಂದ್ರು ಪೂಜಾರ, ನರೇಗಾ ಸಹಾಯಕ ನಿರ್ದೇಶಕ
ಸಕಾಲಕ್ಕೆ ಮಳೆ ಬೆಳೆ ಬಾರದ ಕಾರಣ ನಗರ ಪ್ರದೇಶಕ್ಕೆ ಕೂಲಿ ಅರಸಿ ಹೋಗುತ್ತಿದ್ದ ನಮಗೆ ಇದೀಗ ಬಂಧು ಮಿತ್ರರೊಂದಿಗೆ ನಮ್ಮ ಊರಿನಲ್ಲಿಯೇ ಕೆಲಸ ಹಾಗೂ ಕೂಲಿ ಸಂಬಳ ದೊರಕಲು ಉದ್ಯೋಗ ಖಾತ್ರಿ ತುಂಬಾ ಸಹಕಾರಿಯಾಗಿದೆ.
–ದರ್ಶನಾ ನೆಸ್ರೇಕರ, ಕೂಲಿಕಾರ್ಮಿಕ ಮಹಿಳೆ, ಸಂಗಮೇಶ್ವರ
–ಪ್ರಭಾಕರ ನಾಯಕ