ವಿಜಯಪುರ: ಆದಿಲ್ ಶಾಹಿ ಕಾಲದಲ್ಲಿ ಜಲಸಂರಕ್ಷಣೆಗೆ ಭಾರಿ ಪ್ರಮಾಣದ ಕೆರೆಗಳನ್ನು ನಿರ್ಮಿಸಿದ ದಾಖಲೆ ಇದೆ. ಜಿಲ್ಲೆಯ ಬರ ಪರಿಸ್ಥಿತಿ ಎದುರಿಸಲು ಬ್ರಿಟಿಷ್ ಕಾಲದಲ್ಲಿ ಬರ ನಿವಾರಣೆಗೆ ಸಂಘವನ್ನೇ ಹುಟ್ಟು ಹಾಕಲಾಗಿದೆ. ಹೀಗೆ ವಿಜಯಪುರ ಜಿಲ್ಲೆಗೂ, ಬರಗಾಲದ ನಂಟಿಗೂ ಶತ ಶತಮಾನಗಳ ನಂಟಿದೆ. ಮಳೆ ಕೊರತೆಯ ಕಾರಣ ಇಲ್ಲಿ ಶಾಶ್ವತ ಬರ ಹಾಗೂ ಗುಳೆ ಹೋಗುವುದು ಸಾಮಾನ್ಯ ಎಂಬ ಹಣೆಪಟ್ಟಿ ಕಳಚಿಲ್ಲ.
ಶಾಪಗ್ರಸ್ತ ಈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕ್ರಷಿ ಪ್ರಧಾನ ವ್ಯವಸ್ಥೆ ಇದ್ದರೂ ಮಳೆ ಇಲ್ಲದೇ ಕೃಷಿ ವ್ಯವಸ್ಥೆ ನಲುಗಿದ್ದು, ಇದನ್ನೇ ಬದುಕಿಗೆ ಅಧಾರವಾಗಿಸಿಕೊಂಡಿದ್ದ ಕೃಷಿಕರು, ಕೃಷಿ ಕಾರ್ಮಿಕರು ರಾಜ್ಯ-ನೆರೆ ರಾಜ್ಯಗಳ ಮಹಾನಗರಗಳಿಗೆ ಉದ್ಯೋಗ ಅರಸಿ ಲಕ್ಷಾಂತರ ಜನರು ಕುಟುಂಬ ಸಮೇತ ಗುಳೆ ಹೋಗಿದ್ದಾರೆ. ಇದರ ಹೊರತಾಗಿಯೂ ಗ್ರಾಮೀಣ ಪ್ರದೇಶದಲ್ಲಿ ಗುಳೆ ತಡೆಯಲು ಕೇಂದ್ರ ಸರ್ಕಾರ ನರೇಗಾ ಯೋಜನೆ ರೂಪಿಸಿದ್ದರೂ ಜನರಿಗೆ ಇದರ ಸೌಲಭ್ಯ ದೊರೆಯುತ್ತಿಲ್ಲ.
ದೂರದ ಮಹಾನಗರಗಳಿಗೆ ಗುಳೆ ಹೋಗಲಾಗದ ಹಳ್ಳಿಗರು ಜಿಲ್ಲೆಯಲ್ಲಿರುವ ಪಟ್ಟಣ ಪ್ರದೇಶಗಳಿಗೆ ಉದ್ಯೋಗ ಅರಸಿ ನಿತ್ಯವೂ ಅಲೆದರೂ ಅಲ್ಲಿಯೂ ಉದ್ಯೋಗ ಇಲ್ಲ. ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ಕಲ್ಪಿಸಲು ನರೇಗಾ ಯೋಜನೆ ಇದ್ದರೂ ಬಹುತೇಕ ಹಳ್ಳಿಗಳಲ್ಲಿ ಉದ್ಯೋಗ ಇಲ್ಲವಾಗಿದೆ. ಆದರೆ ನರೇಗಾ ಹೆಸರಿನಲ್ಲಿ ಶ್ರೀಮಂತರು ಖರೀದಿಸಿರುವ ಜೆಸಿಬಿ, ಹಿಟಾಚಿಗಳಂಥ ಭಾರಿ ವಾಹನಗಳ ಸಾಲದ ಕಂತು ಕಟ್ಟಲು ನೆರವಾಗಿದೆ ಎಂದು ಗುಳೆ ಹೋದವರು ದೂರುತ್ತಾರೆ.
ಇದರ ಹೊರತಾಗಿಯೂ ಜಿಲ್ಲೆಯಲ್ಲಿ ನರೇಗಾ ಯೋಜನೆ ಮೂಲಕ ಉದ್ಯೋಗ ಸೃಷ್ಟಿಯಲ್ಲಿ ವಿಜಯಪುರ ಜಿಲ್ಲೆ 3ನೇ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದಾರೆ. ಮೇ ಅಂತ್ಯಕ್ಕೆ ಜಿಲ್ಲೆಯಲ್ಲಿ 8 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿಯಲ್ಲಿ ಈಗಾಗಲೇ ಏಪ್ರಿಲ್ ಆಂತ್ಯಕ್ಕೆ 6.5 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ಹಿಂದಿನ ಆರ್ಥಿಕ ವರ್ಷಗಳ ಕಾರ್ಮಿಕರ ಕೂಲಿ ಹಣದ ಹೊರತಾಗಿ ಮೆಟಿರಿಯಲ್ಸ್ ಕಾಸ್ಟ್‌ನ 30 ಕೋಟಿ ರೂ. ಬರಬೇಕಿದೆ. 29 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿದ್ದು, 107 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಗುಳೆ ಹೋದ ಪ್ರದೇಶದಲ್ಲಿ ದಿನಕ್ಕೆ 500 ರೂ. ಕೂಲಿ ಸಿಗುವ ಜೊತೆಗೆ ವಾರಕ್ಕೆ, ಹಲವು ಸಂರ್ಭಗಳಲ್ಲಿ ಪ್ರತಿ ದಿನವೂ ಕೂಲಿ ದೊರೆಯುತ್ತದೆ. ಒಂದೊಮ್ಮೆ ಕುಟುಂಬದಲ್ಲಿ ಇಬ್ಬರು, ಮೂವರು ದುಡಿಯುವ ಶಕ್ತಿ ಇದ್ದರೆ ಕನಿಷ್ಠ 2 ಸಾವಿರ ರೂ. ಕೂಲಿ ಹಣ ಸಿಗುತ್ತದೆ. ನರೇಗಾದಲ್ಲಿ 250 ರೂ. ಕೂಲಿ ಇದ್ದು, ದುಡಿದ ಕೂಲಿ ಹಣ ಪಡೆಯಲು ತಿಂಗಳೇ ಕಾಯಬೇಕು. ಹೀಗಾಗಿ ಗ್ರಾಮೀಣ ಗುಳೆ ತಪ್ಪಿಸಲು ಸರ್ಕಾರ ರೂಪಿಸಿರುವ ನರೇಗಾ ಯೋಜನೆ ಸಾಮಾನ್ಯ ಕೂಲಿ ಕಾರ್ಮಿಕರ ಪಾಲಿಗೆ ಒಗ್ಗದಂತಾಗಿದೆ.
ಜಿಲ್ಲೆಯಲ್ಲಿ ಭೀಕರ ಬರ ಇದ್ದರೂ ಜಾನುವಾರುಗಳಿಗೆ ಗೋಶಾಲೆ ತೆಗೆಯಲು ಮುಂದಾದರೂ ರೈತರಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ 25 ಕಡೆಗಳಲ್ಲಿ ಮೇವು ಬ್ಯಾಂಕ್ ತೆರೆದು ವಿವಿಧ ಮೂಲಗಳಿಂದ 2,303 ಮೆಟ್ರಿಕ್ ಟನ್ ಮೇವು ಖರೀದಿಸಿ, 2,207 ಮೆಟ್ರಿಕ್ ಟನ್ ಮೇವನ್ನು ಕೆಜಿಗೆ 2 ರೂ. ದರ ವಿಧಿಸಿ ವಿತರಿಸಲಾಗಿದೆ. ಮೇವು ಸಾಗಾಣಿಕೆಗೆ ಈವರೆಗೆ 11.50 ಲಕ್ಷ ರೂ. ವೆಚ್ಚ ಮಾಡಿದ್ದು, 96.22 ಮೆಟ್ರಿಕ್ ಟನ್ ಮೇವು ದಾಸ್ತಾನಿದೆ. ಜಾನುವಾರುಗಳಿಗೆ ಬೇಸಿಗೆ ಹಂಗಾಮಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ನಿಯಂತ್ರಣಕ್ಕಾಗಿ ಈಗಾಗಲೇ ಅಗತ್ಯ ಪ್ರಮಾಣದಲ್ಲಿ ಔಷಧಿ ವಿತರಣೆಗೂ ಕ್ರಮ ಕೈಗೊಳ್ಳಲಾಗಿದೆ. ಜಾನುವಾರುಗಳ ಸಂರಕ್ಷಣೆ ವಿಸಷಯದಲ್ಲಿ ಯಾವುದೆ ಸಮಸ್ಯೆ ಆಗದು ಎನ್ನುತ್ತಾರೆ ಅಧಿಕಾರಿಗಳು.
ಜಿಲ್ಲೆಯ ಎಲ್ಲ 213 ಗ್ರಾಪಂಗಳಲ್ಲಿ ಗುಳೆ ತಡೆಯಲು ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲೇ ನಮ್ಮ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಜಾನುವಾರುಗಳಿಗೆ ಅಗತ್ಯ ಪ್ರಮಾಣದ ಮೇವು ಹಾಗೂ ರೋಗಗಳಿಗೆ ಔಷಧ ಸಂಗ್ರಹಕ್ಕೆ ಪಶು ಸಂಗೋಪನೆ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಬರ ಎದುರಿಸುವಲ್ಲಿ ಜಿಲ್ಲೆಯಲ್ಲಿ ಅನುದಾನದ ಕೊರತೆ ಇಲ್ಲ.
•
ವಿಕಾಸ ಸುರಳಕರ, ಸಿಇಒ, ಜಿಪಂ
•
ಜಿ.ಎಸ್. ಕಮತರ