ದೇವದುರ್ಗ: ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೆಲ ಕಾಮಗಾರಿ ಮುಗಿಯುವ ಹಂತದಲ್ಲಿದ್ದರೆ, ಮತ್ತೆ ಕೆಲವು ಆರಂಭವಾಗಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ, ಶಾಲೆಗಳ ಕಾಂಪೌಂಡ್, ಗೋದಾಮು, ಅಂಗನವಾಡಿ ಕಟ್ಟಡ, ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಗ್ರಾಪಂ ಕಟ್ಟಡ: ತಾಲೂಕಿನ ಶಾವಂತಗೇರಾ, ಅಮರಾಪುರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 33 ಲಕ್ಷ ಹಾಗೂ ರಾಜ್ಯ ಸರ್ಕಾರದ 20 ಲಕ್ಷ ಅನುದಾನ ಸೇರಿ ಒಟ್ಟು 53 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ.
ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ: ತಾಲೂಕಿನ ಮಲದಕಲ್, ಗಲಗ, ಹಿರೇಬೂದೂರು ಗ್ರಾಮ ದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಿಸಲಾಗುತ್ತಿದೆ. ಈಗಾಗಲೇ ಹಿರೇಬೂದೂರು ಗ್ರಾಮದಲ್ಲಿ ಶೇ.90ರಷ್ಟು ಕಾಮಗಾರಿ ಮುಗಿದಿದ್ದು, ಸುಣ್ಣಬಣ್ಣ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಬಾಕಿ ಇದೆ. ಗಲಗ, ಮಲದಕಲ್ ಗ್ರಾಮದಲ್ಲಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದ್ದು, ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಮಲದಕಲ್ ಸೇವಾ ಕೇಂದ್ರಕ್ಕೆ 16.25 ಲಕ್ಷ, ಗಲಗ ಸೇವಾ ಕೇಂದ್ರಕ್ಕೆ 16.25 ಲಕ್ಷ, ಹಿರೇಬೂದೂರು ಸೇವಾ ಕೇಂದ್ರಕ್ಕೆ 25 ಲಕ್ಷ ರೂ. ಒದಗಿಸಲಾಗಿದೆ.
11 ಅಂಗನವಾಡಿ ಕಟ್ಟಡ: ಉದ್ಯೋಗ ಖಾತ್ರಿಯಡಿ ತಾಲೂಕಿನಲ್ಲಿ 11 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಜತೆಗೆ ಅನುದಾನ ಬಿಡುಗಡೆ ಆಗಿದೆ. ಕೆ.ಇರಬಗೇರಾ, ಬಂಡೇಗುಡ್ಡ, ಪೂಜಾರಿ ತಾಂಡಾ, ರಾಜೀವ್ ಗಾಂ ಧಿ ನಗರ, ಶಾವಂತಗೇರಾ, ಕೊತ್ತದೊಡ್ಡಿ, ಬಿ.ಗಣೇಕಲ್, ಪಂದ್ಯನ, ಕರಿಗುಡ್ಡ, ಭೂಮನಗುಂಡ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ 10.80 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ.
ಗೋದಾಮು: ತಾಲೂಕಿನ ಮಾನಸಗಲ್ ಗ್ರಾಮದಲ್ಲಿ ರೈತರ ಕೃಷಿ ಉತ್ಪನ್ನ ದಾಸ್ತಾನಿಗೆ ಗೋದಾಮು ನಿರ್ಮಿಸಲಾಗುತ್ತಿದೆ. ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶವಿದೆ.
53 ಶಾಲೆಗೆ ಕಾಂಪೌಂಡ್: ತಾಲೂಕಿನ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಬಹುತೇಕ ಶಾಲೆಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸುಣ್ಣ-ಬಣ್ಣ ಬಳಿಯಲಾಗಿದೆ. ಬಿ.ಗಣೇಕಲ್, ಸಮುದ್ರ, ಕೆ.ಇರಬಗೇರಾ. ಮುಂಡರಗಿ, ಮಾನಸಗಲ್, ನಾಗಡದಿನ್ನಿ, ಪಟ್ಟಣದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಶಾಲೆ ಸೇರಿ ಇತರೆ ಸರಕಾರಿ ಶಾಲೆಯಲ್ಲಿ ಕಾಂಪೌಂಡ್ ಕಾಮಗಾರಿ ಪೂರ್ಣಗೊಂಡಿದೆ.
-ನಾಗರಾಜ ತೇಲ್ಕರ್