Advertisement

ಕೂಲಿ ಕಾರ್ಮಿಕರ ಗುಳೆ ತಪ್ಪಿಸಲು ನರೇಗಾ ಸಹಕಾರಿ

12:40 PM May 28, 2019 | Suhan S |

ಶಿಗ್ಗಾವಿ: ಬರಗಾಲ ಬವಣೆಗಾಗಿ ಕೂಲಿ ಕಾರ್ಮಿಕರು ದುಡಿಮೆ ಹುಡುಕಿಕೊಂಡು ಗುಳೆ ಹೋಗುವುದನ್ನು ತಪ್ಪಿಸಲು ಹಾಗೂ ಸ್ವಂತ ಗ್ರಾಮದಲ್ಲಿ ಉದ್ಯೋಗ ಸೃಷ್ಟಿಸಿ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡಲು ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್‌ ಸಿಇಒ ಕೆ. ಲೀಲಾವತಿ ಹೇಳಿದರು.

Advertisement

ಸೋಮವಾರ ತಾಲೂಕಿನ ಹಿರೇಮಣಕಟ್ಟಿ ಹಾಗೂ ಹಿರೇಬೆಂಡಿಗೇರಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಹಿರೇಮಣಕಟ್ಟಿ ಗ್ರಾಮದಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಸಮುದಾಯ ಆಧಾರಿತ ಬಹುಪಯೋಗಿ ನೀರಿನ ಸಂಪನ್ಮೂಲ ಸಂರಕ್ಷಣಾ ಕ್ರಮವಾಗಿ, ಕೆರೆಗಳ ಪುನಶ್ಚೇತನಕ್ಕೆ ಕಾಲುವೆಗಳ ದುರಸ್ತಿ, ಕೆರೆಗಳ ಅಚ್ಚುಕಟ್ಟು ಕಾಮಗಾರಿ, ಮಲ್ಟಿಚೆಕ್‌ ಡ್ಯಾಂ ನಿರ್ಮಾಣ ಮಾಡುವುದರಿಂದ ಅಂತರ್ಜಲ ಪುನಃಶ್ಚೇತನ ಮಾಡಬಹುದಾಗಿದೆ. ಅಲ್ಲದೇ ಬದುಗಳಲ್ಲಿ ಗಿಡಮರಗಳನ್ನು ನೆಡುವುದು, ಕೃಷಿ ಭೂಮಿಯಲ್ಲಿ ಬದುಗಳ ನಿರ್ಮಾಣ, ಮಣ್ಣು ಬಸಿಯದಂತೆ ತಡೆಗಟ್ಟುವುದು, ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ, ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳಲ್ಲಿ ವೈಯಕ್ತಿಕ ಕೆಲಸಗಳ ಮೂಲಕ ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ ಎಂದ‌ರು.

ಜೂನ್‌ 11 ರಂದು ಮಾನ್ಸುನ್‌ ಮಾರುತದ ಮಳೆಗಾಲ ಆರಂಭದಲ್ಲಿ ಜಲಾಮೃತ ಯೋಜನೆಯಡಿ ತಾಲೂಕಿನ ಸರ್ಕಾರಿ ಕಚೇರಿಗಳ ಕಂಪೌಂಡ್‌ಗಳ ಒಳಗೆ, ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ, ಅದನ್ನು ನಿರ್ವಹಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು ಪೂಜಾರ ಮಾತನಾಡಿ, ನಿರಂತರ ಮಾನವ ಚಟುವಟಿಕೆಯಿಂದ ಹಾನಿಯಾಗುತ್ತಿರುವ ಪರಿಸರ ರಕ್ಷಿಸಲು ಸರ್ಕಾರದ ಯಶಸ್ವಿ ಯೋಜನೆಯಾದ ನರೇಗಾದಂತಹ ಕಾರ್ಯಕ್ರಮ ಸಹಕಾರಿಯಾಗಿವೆ. ಪ್ರತಿಯೊಬ್ಬ ಕಾರ್ಮಿಕನಿಗೂ ಅದರ ತಿಳಿವಳಿಕೆ ಅಗತ್ಯವಿದೆ. ನರೇಗಾ ಯೋಜನೆಯಡಿ ಕೂಲಿ ವೇತನದಲ್ಲಿ ಹೆಣ್ಣು-ಗಂಡು ಎಂಬ ಭೇದ ಭಾವಗಳಿಲ್ಲ. ಎಲ್ಲರೂ ಸಮಾನ ಕೂಲಿ ಪಡೆಯಬಹುದಾಗಿದೆ. ಅಲ್ಲದೇ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಡಿ ಹಲವಾರು ಕಾರ್ಯಕ್ರಮಗಳನ್ನು ನರೇಗಾ ಯೋಜನೆ ಮೂಲಕ ಸಂಯೋಜಿಸಲಾಗಿದ್ದು, ಪ್ರತಿಯೊಬ್ಬ ಕಾರ್ಮಿಕರೂ ಪ್ರಯೋಜನೆ ಫಲ ಪಡೆಯಬಹುದಾಗಿದೆ ಎಂದರು.

ನಂತರ ಹಿರೆಬೆಂಡಿಗೇರಿ ಗ್ರಾಮಕ್ಕೆ ತೆರಳಿ ಪಂಚಾಯತಿ ವ್ಯಾಪ್ತಿಯ ಗೂಗಿಮಡ್ಡಿಯಿಂದ ಕಾಡಗಟ್ಟಿಯವರೆಗೆ ನೀರುಗಾಲುವೆ ಹೂಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದರು.

Advertisement

ಜಿಲ್ಲಾ ಎಂಐಎಸ್‌ ಸಂಯೋಜಕ ಪ್ರಶಾಂತ ಬಳಿಗಾರ, ದೀಪಕ, ತಾಪಂ ಎಂಐಎಸ್‌ ಸಂಯೋಜಕ ಮಹದೇವ ಬಿ., ಐಇಸಿ ಸಂಯೋಜಕಿ ಹೂಗಾರ, ರಾಜೇಶ್ವರಿ ಬಿ.ಎನ್‌., ತಾಂತ್ರಿಕ ಸಂಯೋಜಕ ಎಂ.ಎಂ. ಪಾಟೀಲ, ಗ್ರಾಪಂ ಮಣಕಟ್ಟಿ ಗ್ರಾಮದ ಪಿಡಿಒ ಬಸವರಾಜ ಮದನಬಾವಿ, ಹಿರೆಬೆಂಡಿಗೇರಿ ಪಿಡಿಒ ಬಸವರಾಜ ಪೂಜಾರ ಹಾಗೂ ಸರ್ವ ಸದಸ್ಯರು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next