ಸುರಪುರ: ಕೊರೊನಾ ಗ್ರಾಮೀಣ ಜನತೆಗೆ ಬದುಕಿನ ಪಾಠ ಕಲಿಸಿದೆ. ಹುಟ್ಟಿದೂರಲ್ಲಿಯೇ ದುಡಿದುಣ್ಣುವ ನೀತಿ ಹೇಳಿ ಕೊಟ್ಟಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದಲ್ಲಿಯೇ ಕೆಲಸ ಸಿಗುತ್ತಿದ್ದು ಕಾರ್ಮಿಕರಿಗೆ ಇದು ವರದಾನವಾಗಿ ಪರಿಣಮಿಸಿದೆ. ಕೊವೀಡ್ 2ನೇ ಅಲೆ ಹಿನ್ನೆಲೆಯಲ್ಲಿ ಕರ್ಫ್ಯೂ ಆಗಿರುವುದರಿಂದ ಗುಳೆ ಹೋಗಿದ್ದ ಕಾರ್ಮಿಕರು ಮರಳಿ ಊರು ಸೇರಿದ್ದಾರೆ. ಇತ್ತ ಸರ್ಕಾರ ಕೂಡಾ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಖಾತ್ರಿ ಯೋಜನೆಯಡಿ ಕೆಲಸ ಕೈಗೆತ್ತಿಕೊಂಡಿದ್ದು ಪ್ರತಿ ಕಾರ್ಮಿಕ ಕುಟುಂಬಕ್ಕೆ ಗ್ರಾಮದಲ್ಲಿಯೇ ಕೆಲಸ ನೀಡುತ್ತಿದೆ. ತಾಲೂಕಿನ 23 ಗ್ರಾಪಂನಲ್ಲಿ ನರೇಗಾದಲ್ಲಿ ವಿವಿಧ ಕೆಲಸ ಕೈಗೆತ್ತಿಕೊಳ್ಳ ಲಾಗಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ವರ್ಷ 1156 ಜಾಬ್ ಕಾರ್ಡ್ ಹೆಚ್ಚಳವಾಗಿವೆ.
ಪ್ರಸಕ್ತ ಸಾಲಿನಲ್ಲಿ 42,076 ನೋಂದಾಯಿತ ಕುಟುಂಬಗಳು. ಆ ಪೈಕಿ 87,349 ಕೂಲಿಕಾರರಿದ್ದಾರೆ. ಪರಿಶಿಷ್ಟ ಜಾತಿ 4896, ಪರಿಶಿಷ್ಟ ಪಂಗಡ 5135, ಇತರೆ ಹಿಂದುಳಿದ 31452 ಕಾರ್ಮಿಕರಿದ್ದಾರೆ. ಈ ಪೈಕಿ 6824 ಕುಟುಂಬಗಳು ಕೆಲಸ ಕೇಳಿದ್ದವು. 6745 ಕುಟುಂಬಗಳಿಗೆ ಕೆಲಸಕ್ಕೆ ಬರಲು ಸೂಚಿಸಲಾಗಿತ್ತು.
3760 ಕುಟುಂಬಗಳು ಸೇರಿ 5763 ಜನ ಕಾರ್ಮಿಕರು ಯೋಜನೆಯಡಿ ಕೆಲಸ ನಿರ್ವಹಿಸಿದ್ದಾರೆ. ಯೋಜನೆಯಡಿ 45,112 ದಿನ ಕಾರ್ಮಿಕರಿಗೆ ಕೆಲಸ ನೀಡಲು ಮಾನವ ದಿನ ಸೃಷ್ಟಿಸಲಾಗಿದ್ದು ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಸಾಮಗ್ರಿ ಖರೀದಿಗೆ 9.91 ಲಕ್ಷ ಮತ್ತು 1.44 ಕೋಟಿ ಕೂಲಿ ಪಾವತಿಗೆ ಖರ್ಚು ಮಾಡಲಾಗಿದೆ.
ಕಳೆದ ಸಾಲಿನಲ್ಲಿ ಮಾರ್ಚ್ ಅಂತ್ಯದವರೆಗೆ ಪರಿಶಿಷ್ಟ ಜಾತಿ 4770, ಪರಿಶಿಷ್ಟ ಜನಾಂಗದ 4966, ತರೆ ಹಿಂದುಳಿದ 3964 ಸೇರಿ ಒಟ್ಟ 40,920 ಕುಟುಂಬಗಳು 85345 ಜನ ಕಾರ್ಮಿಕರು ಕೆಲಸಕ್ಕೆ ಹೆಸರು ನೋಂದಾಯಿಸಿದ್ದಾರೆ. 19041 ಕುಟುಂಬಗಳಿಗೆ ಕೆಲಸಕ್ಕೆ ಸೂಚಿಸಲಾಗಿತ್ತು. ಆದರೆ 33303 ಜನ ಕಾರ್ಮಿಕರು ಕೆಲಸ ಮಾಡಿದ್ದರು. 26.42 ಕೋಟಿ ಕೂಲಿ ಮತ್ತು 4.9 ಕೋಟಿ ಸಾಮಗ್ರಿ ಪಾವತಿಸಲಾಗಿದೆ.
ಶಾಲೆಗೆ ತಡೆಗೋಡೆ, ಶೌಚಾಲಯ ನಿರ್ಮಾಣ, ಅಡುಗೆ ಕೋಣೆ, ಸಸಿ ನೆಡುವುದು, ಮಣ್ಣು ಮತ್ತು ನೀರು ಸಂರಕ್ಷಣೆ, ಮಳೆ ನೀರಿನ ಸಂಗ್ರಹ ತೊಟ್ಟಿ, ರಸ್ತೆ ಸುಧಾರಣೆ, ನಾಲಾ ಹೂಳೆತ್ತುವುದು, ಕ್ಷೇತ್ರ ಬದು ನಿರ್ಮಾಣ, ಮಳೆ ನೀರು ಕೊಯ್ಲು, ಕೆರೆ ಹೂಳು ಎತ್ತುವುದು ಸೇರಿ ಇತರೆ ಕಾಮಗಾರಿ
ಕೈಗೆತ್ತಿಕೊಳ್ಳಲಾಗಿದೆ.
ಕಾರ್ಮಿಕರಿಗೆ ವರದಾನವಾದ ಯೋಜನೆ: ಗ್ರಾಪಂ ವ್ಯಾಪ್ತಿ ಆಯಾ ಗ್ರಾಮಗಳಲ್ಲಿಯೇ ಕೆಲಸ. ಮಧ್ಯ ವರ್ತಿಗಳ ಪಾಲುದಾರಿಕೆ ಇಲ್ಲ. ಕೂಲಿ ಹಣ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರ ಜಮಾ. ಕಳೆದ ವರ್ಷ ಪ್ರವಾಹ ಮತ್ತು ಅತಿವೃಷ್ಟಿ ಕಾರಣದಿಂದ 150 ಮಾನವ ದಿನ ಸೃಷ್ಟಿಸಿ 275 ರೂ. ಕೂಲಿ ನೀಡಲಾಗಿತ್ತು. ಈ ಬಾರಿ 100 ಮಾನವ ದಿನ ಸೃಷ್ಟಿಸಿದ್ದು 289 ರೂ. ಗೆ ಕೂಲಿ ಹೆಚ್ಚಿಸಲಾಗಿದೆ.ಒಟ್ಟಾರೆ ನರೇಗಾ ದುಡಿಯುವ ಕಾರ್ಮಿಕರಿಗೆ ವರದಾನವಾಗಿದೆ.
*ಸಿದ್ದಯ್ಯ ಪಾಟೀಲ್