ಹಿಂದೆ ಇಂತಹ ಮಾದಕ ವಸ್ತುಗಳನ್ನು ವಿದೇಶಗಳಿಂದ ಅಕ್ರಮವಾಗಿ ತರುತ್ತಿದ್ದರು. ಈಗ ಅದನ್ನು ಮುಖ್ಯವಾಗಿ ಉತ್ತರ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಎನ್ನುವ ವಿಚಾರ ಈಗ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ.
Advertisement
6 ಕೋಟಿ ರೂ. ಮೌಲ್ಯದ ಡ್ರಗ್ ಸಹಿತ ನೈಜೀರಿಯ ಪ್ರಜೆ ಪೀಟರ್ ಐಕೇಡಿ ಬೆಲನೊವು ಎಂಬಾತನನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಮಂಗಳೂರಿನಲ್ಲೇ ಅತಿ ದೊಡ್ಡ ಹಾಗೂ ರಾಜ್ಯದ ಎರಡನೇ ಅತಿ ದೊಡ್ಡ ಪ್ರಕರಣ ಇದಾಗಿದೆ. ಪ್ರಸ್ತುತ ಇದರ ಮೂಲಕ್ಕೆ ಹೋಗಿ ದೊಡ್ಡ ತಿಮಿಂಗಿಲಗಳನ್ನು ಬಲೆಗೆ ಬೀಳಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಪ್ರಸ್ತುತ ನೇರವಾಗಿ ಪೊಲೀಸರಿಗೆ ಈ ಡ್ರಗ್ ಯಾವ ಕಡೆಯಿಂದ ಬಂದಿದೆ ಎನ್ನುವುದರ ಸುಳಿವು ಲಭಿಸಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸಣ್ಣಪುಟ್ಟ ಪೆಡ್ಲರ್‌ಗಳನ್ನು ಹಿಂದಿನಿಂದಲೂ ಬಂಧಿಸುತ್ತಾ ಬಂದಿದ್ದ ಪೊಲೀಸರು, ಈ ಬಾರಿ ಇದರ ಮೂಲಕ್ಕೇ ಹೋಗಬೇಕು ಎನ್ನುವ ಇರಾದೆಯಲ್ಲಿ ತನಿಖೆ ಕೈಗೊಂಡಿದ್ದರು. ಪೆಡ್ಲರ್‌ಗಳು ಅದರಲ್ಲೂ ಪೀಟರ್‌ನಂತಹ ನಟೋರಿಯಸ್‌ಗಳು ಯಾವುದೇ ಮೂಲವನ್ನು ಬಿಟ್ಟು ಕೊಡುವುದಿಲ್ಲ. ಪೆಡ್ಲರ್‌ಗಳ ಬ್ಯಾಂಕ್ ವಹಿವಾಟನ್ನು ಗಮನಿಸಿಕೊಂಡು ತನಿಖೆ ಕೇಂದ್ರೀಕರಿಸಿದಾಗ ಆತ ಬೆಂಗಳೂರಿನ ಒಂದೇ ಕಡೆ ಎಟಿಎಂನಲ್ಲಿ ಹಣ ಪಡೆಯುತ್ತಿರುವುದು ಕಂಡು ಬಂತು. ಅದರಂತೆ ಆತನನ್ನು ಗೋವಿಂದ ರೆಡ್ಡಿ ಲೇಔಟಿನಿಂದ ಬಂಧಿಸಲಾಗಿತ್ತು. ಪೀಟರ್ ಐಕೇಡಿ 2019ರಲ್ಲಿ ಬಿಸಿನೆಸ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನಲ್ಲಿ ರಾಜ್ಯದ ವಿವಿಧೆಡೆಗೆ ಎಂಡಿಎಂಎನಂತಹ ಎಕ್ಟೆಸಿ ಮಾದಕ ವಸ್ತು ವಿತರಿಸಿಕೊಂಡಿದ್ದ. ಈತ ಬೆಂಗಳೂರಿಗೆ ಬಂದು ಎರಡೇ ತಿಂಗಳಲ್ಲಿ ಬಿಸಿನೆಸ್ ವೀಸಾ ಅವಧಿ ಮುಗಿದಿದ್ದರೂ ಆತ ತನ್ನ ದೇಶಕ್ಕೆ ಹಿಂದಿರುಗಿಲ್ಲ. ಇಲ್ಲೇ ಇದ್ದುಕೊಂಡು ಡ್ರಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಆರೋಪಿ ಪೀಟರ್ ಈಶಾನ್ಯ ಭಾರತದ ಯುವತಿಯೊಬ್ಬಳನ್ನು ವಿವಾಹವಾಗಿದ್ದು, ಒಂದು ಮಗು ಕೂಡ ಇದೆ. ಆಕೆ ಬ್ಯೂಟಿಷಿಯನ್ ಆಗಿದ್ದಾಳೆ. ಪೀಟರ್ ತನ್ನ ಡ್ರಗ್ ದಂಧೆಯನ್ನು ಮನೆಯಿಂದ 15 ಕಿ.ಮೀ. ದೂರದ ತನ್ನ ಕಚೇರಿಯಲ್ಲೇ ಮಾಡುತ್ತಿದ್ದ.
Related Articles
ಲಭ್ಯ ಮಾಹಿತಿ ಪ್ರಕಾರ ಪೀಟರ್ ಐಕೇಡಿ ಎಂಡಿಎಂಎ ಡ್ರಗ್ ವಿತರಿಸುವಾಗಲೂ ಯಾರೊಂದಿಗೂ ನೇರವಾದ ವಹಿವಾಟು ಇರಿಸಿಕೊಂಡಿರದೆ ಪರೋಕ್ಷವಾಗಿ ವಿತರಿಸುತ್ತಿದ್ದ. ಈತ ಎರಡು ತಿಂಗಳಿಗೊಮ್ಮೆ ಫೋನ್ ನಂಬರ್ ಬದಲಾಯಿಸುತ್ತಿದ್ದು, ಅಲ್ಲದೆ ಭಾರತದ ಸಿಮ್ ಕೂಡ ಇರಲಿಲ್ಲ. ಬದಲಿಗೆ ಖಾಸಗಿ ಸಂಸ್ಥೆಗಳು ಒದಗಿಸುವ ವರ್ಚುವಲ್ ಫೋನ್ ನಂಬರ್ ಬಳಸುತ್ತಿದ್ದ.
Advertisement
ಆತ ನೈಜೀರಿಯಾದಲ್ಲಿರುವ ತನ್ನ ಸ್ನೇಹಿತರಿಂದ ಅಲ್ಲೇ ಸಿಮ್ ಪಡೆದು, ವಾಟ್ಸಾಪ್ ಆಕ್ಟಿವೇಟ್ ಮಾಡಿಸಿಕೊಂಡು ಸಿಮ್ ಇಲ್ಲದೆಯೇ ಇಲ್ಲಿ ಬಳಕೆ ಮಾಡುತ್ತಿದ್ದ! ಲಭ್ಯ ಮಾಹಿತಿಯಂತೆ 1 ಕಿಲೋಗ್ರಾಂ ಎಂಡಿ ಎಂಎಯನ್ನು ಈ ಮುಖ್ಯ ಏಜೆಂಟರು 5ರಿಂದ 10 ಲಕ್ಷ ರೂ.ಗೆ ಪಡೆದುಕೊಂಡು ಅದನ್ನು 5ರಿಂದ 10 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.
– ವೇಣುವಿನೋದ್ ಕೆ.ಎಸ್