ನಿರ್ದೇಶಕ ಎಸ್.ನಾರಾಯಣ್ ನಿರ್ದೇಶನದ “ಪಂಟ’ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮುನ್ನ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿತ್ತು ಚಿತ್ರತಂಡ. ನಾರಾಯಣ್ ಸಿನಿಮಾ ಆಡಿಯೋ ರಿಲೀಸ್ ಅಂದಮೇಲೆ, ಚಿತ್ರರಂಗದ ದಂಡು ಇರದಿದ್ದರೆ ಹೇಗೆ? ಅಂದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು, ರಾಕ್‌ಲೈನ್ ವೆಂಕಟೇಶ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕ ಶ್ರೀನಿವಾಸಮೂರ್ತಿ, ಅಭಿಜಿತ್, ಉಮೇಶ್ ಬಣಕಾರ್ ಸೇರಿದಂತೆ ಬಹುತೇಕ ನಿರ್ದೇಶಕ, ನಿರ್ಮಾಪಕರು “ಪಂಟ’ ಆಡಿಯೋ ರಿಲೀಸ್‌ಗೆ ಸಾಕ್ಷಿಯಾದರು. ಆಡಿಯೋ ಬಿಡುಗಡೆ ಮುನ್ನ, ರಾಕ್‌ಲೈನ್ ವೆಂಕಟೇಶ್ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ಆಗ ಎಲ್ಲರನ್ನೂ ವೇದಿಕೆಗೆ ಆಹ್ವಾನಿಸಿದ ನಂತರ ನಾರಾಯಣ್ ಮಾತು ಶುರುಮಾಡಿದರು.
“ನನಗೆ ಈ ಸಿನಿಮಾ ಸಿಕ್ಕಿದ್ದು ಅಭಿಜಿತ್ ಅವರಿಂದ ಅವರ ಗೆಳೆಯರಾದ ಸುಬ್ರಹ್ಮಣ್ಯಂ ಕನ್ನಡದಲ್ಲೊಂದು ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದಾಗ, ನನ್ನನ್ನು ಭೇಟಿ ಮಾಡಿಸಿ, “ಪಂಟ’ ಚಿತ್ರ ಮಾಡೋಕೆ ಕಾರಣರಾದರು. ಇದಕ್ಕೂ ಮುನ್ನ ನಾನು ಮೂರು ವರ್ಷ ಅಜ್ಞಾತವಾಸದಲ್ಲಿದ್ದೆ. ಈ ಸಿನಿಮಾ ಶುರುಮಾಡಿದ ಬೆನ್ನಹಿಂದೆಯೇ ರಾಕ್‌ಲೈನ್ ವೆಂಕಟೇಶ್ “ಮನಸು ಮಲ್ಲಿಗೆ’ ಚಿತ್ರ ಕೊಟ್ಟರು. ಕೆಲ ಸಂದರ್ಭಗಳಲ್ಲಿ ಕೆಲ ವ್ಯಕ್ತಿಗಳಿಗೆ ಕೆಲವು ವಿಷಯಗಳು ಪ್ರಶ್ನಾರ್ಥಕವಾಗಿ ಉಳಿದುಬಿಡುತ್ತವೆ. ಹಾಗಾಗಿ ನಾನು ಮೂರು ವರ್ಷ ಅಜ್ಞಾತವಾಸದಲ್ಲಿದ್ದೆ ಅಂತ ಹೇಳಿಕೊಂಡೆ. ಈ ಎರಡು ಸಿನಿಮಾಗಳ ಮೂಲಕ ಹೊಸ ಇನ್ನಿಂಗ್ಸ್ ಶುರುಮಾಡಿದ್ದೇನೆ. ಫೆಬ್ರವರಿಯಲ್ಲಿ “ಪಂಟ’ ತೆರೆಗೆ ಬರಲಿದೆ. ಚಿತ್ರಕ್ಕೆ ಹಾಡು ಇರಲಿಲ್ಲ. ನಿರ್ಮಾಪಕರು ಹಾಡು ಕೊಡಿ ಅಂದಾಗ, ಒಂದು ಹಾಡು ಮಾಡಿದೆ. ಇನ್ನೊಂದು ಮಾಡಿಕೊಡಿ ಅಂದಾಗ ಅದನ್ನೂ ಮಾಡಿಕೊಟ್ಟೆ. ಕೊನೆಗೆ ಆ ಹಾಡನ್ನು ಸುದೀಪ್ ಬಳಿ ಹಾಡಿಸಬೇಕು ಅಂದಾಗ, ಅದೂ ಆಗೋಯ್ತು. ಒಳ್ಳೆಯ ಹಾಡು ಹಾಡಿಕೊಟ್ಟ ಸುದೀಪ್‌ಗೆ, ನನಗೆ ಈ ಚಿತ್ರ ನಿರ್ದೇಶಿಸಲು ಕೊಟ್ಟ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳ್ತೀನಿ. ಇನ್ನು, ಇಲ್ಲಿ ಹೊಸತನವಿದೆ. ಹೊಸ ಪ್ರತಿಭಾವಂತರಿದ್ದಾರೆ ಎಂದರು ನಾರಾಯಣ್.
ನಿರ್ಮಾಪಕ ಸುಬ್ರಹ್ಮಣ್ಯಂ ಅವರಿಗೆ ಕನ್ನಡ ಚಿತ್ರ ಮಾಡುವ ಆಸೆ ಇತ್ತಂತೆ. ಅಭಿಜಿತ್ ಬಳಿ ಆ ವಿಷಯ ಹೇಳಿಕೊಂಡಾಗ, ನಾರಾಯಣ್ ಅವರನ್ನು ಭೇಟಿ ಮಾಡಿಸಿದರಂತೆ. ಕೊನೆಗೆ ಒಂದು ಕಥೆಯನ್ನು ಕೊಟ್ಟು, ಅದನ್ನೇ ಚಿತ್ರ ಮಾಡಿ ಅಂದಾಗ, ಸಿನಿಮಾ ಶುರುವಾಗಿದೆ. ಕನ್ನಡಿಗರಲ್ಲಿ ಪ್ರೀತಿ ಇದೆ ಎಂಬುದನ್ನು ಕಂಡಿದ್ದೇನೆ. ನಿಮ್ಮಗಳ ಪ್ರೀತಿ “ಪಂಟ’ ಮೇಲೆ ಇರಲಿ. ಮುಂದೆ ಇನ್ನೂ ಒಳ್ಳೆಯ ಚಿತ್ರ ಮಾಡುವ ಆಸೆ ಇದೆ ಎಂದರು ಸುಬ್ರಹ್ಮಣ್ಯಂ.
ಟೀಸರ್ ಬಿಡುಗಡೆ ಮಾಡಿ ಮಾತಿಗಿಳಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, “ಚಿತ್ರದ ಶೀರ್ಷಿಕೆಯಲ್ಲೇ ಖದರ್ ಇದೆ. ನಾರಾಯಣ್ ಯುವ ಪ್ರತಿಭಾವಂತರನ್ನು ಹಿಡಿದು ಸಿನಿಮಾ ಮಾಡಿ, ಗೆಲ್ಲುವುದರಲ್ಲಿ ನಿಸ್ಸೀಮರು. ಈ ಚಿತ್ರ ಅವರಿಗೆ ಯಶಸ್ಸು ಕೊಡಲಿ. ಇನ್ನು, ನಾರಾಯಣ್ ಅಜ್ಞಾತವಾಸದಲ್ಲಿದ್ದೆ ಎಂದು ಹೇಳಿಕೊಂಡರು. ಆ ಮಾತನ್ನು ಪಕ್ಕಕ್ಕಿಡಿ. ನಿಮ್ಮನ್ನು ಯಾರೂ ಕೈ ಬಿಡಲ್ಲ. ನಿಮ್ಮಂತಹ ಒಳ್ಳೆಯ ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬೇಕು. ನಿಮ್ಮಂತವರಿಗೆ ಎಕ್ಸ್‌ಪೆರಿ ಡೇಟ್ ಇಲ್ಲ ಎಂದರು ರಾಕ್‌ಲೈನ್.
ಅಂದು ಮಾಜಿ ಸಚಿವ ಎಚ್.ಎಂ.ರೇವಣ್ಣ, ಸೌತ್ ಇಂಡಿಯಾ ಚೇಂಬರ್ ಅಧ್ಯಕ್ಷ ಗಂಗರಾಜ್, ಉಮೇಶ್ ಬಣಕಾರ್, ರಿತೀಕ್ಷಾ, ಅನೂಪ್ ರೇವಣ್ಣ, ಅಭಿಜಿತ್, ಶಾಸಕ ಶ್ರೀನಿವಾಸಮೂರ್ತಿ, ನಾಯಕ ಅನೂಪ್ ರೇವಣ್ಣ, ನಾಯಕಿ ರಿತೀಕ್ಷಾ, ಆನಂದ್ ಆಡಿಯೋದ ಶ್ಯಾಮ್ ಇತರರು ಇದ್ದರು.