Advertisement

ಪೊಲೀಸರಿಗೆ ಶರಣಾದ ನಾರಾಯಣಸ್ವಾಮಿ

12:47 PM Feb 24, 2018 | Team Udayavani |

ಕೆ.ಆರ್‌.ಪುರ: ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ಕಡತಗಳ ಮೇಲೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಲು ಯತ್ನಿಸಿದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾರಾಯಣಸ್ವಾಮಿ ಶುಕ್ರವಾರ ಬೆಳಗ್ಗೆ ರಾಮಮೂರ್ತಿನಗರ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ವ್ಯಾಜ್ಯ ವಿರುವ ನಿವೇಶನಗಳನ್ನು ಖಾತೆ ಮಾಡಿಸಿಕೊಡಲು ಒಪ್ಪದಿದ್ದಕ್ಕೆ, ಪಾಲಿಕೆಯ ಕಂದಾಯ ಕಚೇರಿಯಲ್ಲಿ ಪೆಟ್ರೋಲ್‌ ಸುರಿದು ದಾಂಧಲೆ ನಡೆಸಿ ಅಧಿಕಾರಿಗಳ ಮೇಲೆ ದರ್ಪ ಮೆರೆದಿದ್ದ ಇದನ್ನು ತಡೆದ ಎಆರ್‌ಒ ಮೇಲೆ ದೌರ್ಜನ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಡತಗಳ ಮೇಲೆ ಪೆಟ್ರೋಲ್‌ ಎರಚುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬಿಬಿಎಂಪಿಯ ಪ್ರಭಾರ ಕಂದಾಯ ಅಧಿಕಾರಿ ಸತೀಶ್‌ಕುಮಾರ್‌ ನಾರಾಯಣಸ್ವಾಮಿ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಂಧನ ಭೀತಿಯಿಂದ ಆರೋಪಿ ಪರಾರಿಯಾಗಿದ್ದ. ಇತ್ತ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಶುಕ್ರವಾರ ನೇರವಾಗಿ ಠಾಣೆಗೆ ಬಂದು ಶರಣಾಗಿದ್ದಾನೆ.

ಊರೂರು ಅಲೆದ ನಾರಾಯಣಸ್ವಾಮಿ: ಬಂಧನ ಭೀತಿಯಿಂದ ನಾಪತ್ತೆಯಾಗಿದ್ದ ನಾರಾಯಣಸ್ವಾಮಿ ಕಲಬುರಗಿ, ಕುಕ್ಕೆಸುಬ್ರಹ್ಮಣ್ಯ, ಚಿಕ್ಕಮಗಳೂರು ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದು, ಗುರುವಾರ ರಾತ್ರಿ ಕಲ್ಕೆರೆಯಲ್ಲಿರುವ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದಾನೆ. ವಾಪಸ್‌ ಕಲ್ಕೆರೆಗೆ ಬಂದಿರುವ ಮಾಹಿತಿ ತಿಳಿದ ಪೊಲೀಸರು ಬಂಧನಕ್ಕೆ ಧಾವಿಸುತ್ತಿದ್ದಂತೆ ಖುದ್ದು ತಾನೇ ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣದ ಕುರಿತಂತೆ ವಿಚಾರಣೆಗಾಗಿ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದರು. ನಂತರ ಬಾಣಸವಾಡಿ ಉಪವಿಭಾಗದ ಎಸಿಪಿ ಮಹದೇವಪ್ಪನೇತೃತ್ವದಲ್ಲಿ ಆರೋಪಿಯ ವಿಚಾರಣೆ ನಡೆಸಿದರು. ಅನಂತರ ಸ್ಥಳ ಮಹಜರ್‌ ಮಾಡಲು ಹೊರಮಾವು ಉಪವಲಯದ ಬಿಬಿಎಂಪಿ ಕಚೇರಿಗೆ ಕರೆದೊಯ್ದಿದ್ದರು. ಬಳಿಕ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Advertisement

ಪೆಟ್ರೋಲ್‌ ಅಲ್ವಂತೆ, ಜ್ಯೂಸ್‌ ಅಂತೆ!: ಆರೋಪಿ ನಾರಾಯಣಸ್ವಾಮಿ ಪೊಲೀಸರ ವಿಚಾರಣೆ ವೇಳೆ ತಾನು ಎರಚಿದ್ದು, ಪೆಟ್ರೋಲ್‌ ಅಲ್ಲ ಜ್ಯೂಸ್‌ ಎಂದು ಹೇಳಿಕೆ ನೀಡಿದ್ದಾನೆ. ನನಗೆ ಪೆಟ್ರೋಲ್‌ ಎರಚುವ ಉದ್ದೇಶವಿರಲಿಲ್ಲ. ಅಂದು ಜ್ಯೂಸ್‌ ಬಾಟಲಿಯನ್ನು ತನ್ನೊಂದಿಗೆ ಕೊಂಡೊಯ್ದಿದೆ. ಅದನ್ನೇ ಕೋಪಗೊಂಡ ನಾನು ಎರಚಿದ್ದೇನೆ ಎಂದು ಹೇಳಿಕೆ ದಾಖಲಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ, ಪೊಲೀಸರು ವಿಧಿವಿಜ್ಞಾನ ಪರೀûಾ ಕೇಂದ್ರಕ್ಕೆ ಕಡತಗಳು ಹಾಗೂ ಬಾಟಲಿಯನ್ನು ಹಸ್ತಾಂತರಿಸಲಾಗಿದೆ. ವರದಿ ಬಂದ ನಂತರ ಅಧಿಕೃತ ದಾಖಲೆ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next