ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಟಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಯಲ್ಲಿ ನಡೆದ ಮರು ಮತದಾನದ ವೇಳೆ ಪೊಲೀಸ್ ನಿಷೇಧಾಜ್ಞೆ ಉಲ್ಲಂ ಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಬಿಜೆಪಿ ಶಾಸಕ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಗೊಳಿಸುವಂತೆ ಕೋರಿ ನಾರಾಯಣಸ್ವಾಮಿ ಸೇರಿ 22 ಮಂದಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಧೀನ ನ್ಯಾಯಾಲಯದ ವಿಚಾರಣೆಗೆ ಮಧ್ಯಂತರ ತಡೆ ನೀಡಿ, ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, “ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ಶಾಸಕ ವೈ.ಎ. ನಾರಾಯಣಸ್ವಾಮಿ ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ. ಆದರೆ, ಅವರು ತಲೆಮರೆಸಿಕೊಂಡಿಲ್ಲ. ಆದ್ದರಿಂದ ಪ್ರಕರಣ ಹಾಗೂ ಈ ಸಂಬಂಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ನ್ಯಾಯಪೀಠವನ್ನು ಕೋರಿದರು.
ಶಾಸಕರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಹೇಳಿರುವುದಕ್ಕೆ ಗರಂ ಆದ ನ್ಯಾಯಪೀಠ, “ಶಾಸಕರು ತಲೆ ಮರೆಸಿಕೊಳ್ಳಲು ಸಾಧ್ಯವೇ? ಚಾರ್ಜ್‌ಶೀಟ್‌ನಲ್ಲಿ ಆ ರೀತಿ ಬರೆಯಲು ಕಾರಣವೇನು ಎಂದು ಸಂಬಂಧಪಟ್ಟ ಡಿಸಿಪಿ ಹಾಗೂ ಪ್ರಕರಣದ ತನಿಖಾಧಿಕಾರಿ ಖುದ್ದು ಹಾಜರಾಗಿ ಪ್ರಮಾಣಪತ್ರದ ಮೂಲಕ ವಿವರಣೆ ಕೊಡಬೇಕು’ ಎಂದು ನಿರ್ದೇಶನ ನೀಡಿತು. ಇದೇ ವೇಳೆ ಸಂಜಯನಗರ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ನ್ಯಾಯಪೀಠ ಆದೇಶಿಸಿತು.
ಪ್ರಕರಣವೇನು?: 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೆಬ್ಟಾಳ ಕ್ಷೇತ್ರಕ್ಕೆ ಮೇ 14ರಂದು ಮರು ಮತದಾನ ನಡೆಸಲಾಗಿತ್ತು. ಈ ವೇಳೆ ಲೊಟ್ಟೆಗೊಲ್ಲಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೈ.ಎ. ನಾರಾಯಣಸ್ವಾಮಿ ನಿಷೇಧಾಜ್ಞೆ ಉಲ್ಲಂಘಿಸಿ ಮತ್ತೂಂದು ಪಕ್ಷದ ಅಭ್ಯರ್ಥಿಯ ವಿರುದ್ಧ ಘೋಷಣೆ ಕೂಗುತ್ತಾ, ಶಾಂತಿಯುತ ಮತದಾನಕ್ಕೆ ಭಂಗ ಉಂಟು ಮಾಡಿದ್ದಾರೆಂದು ಆರೋಪಿಸಿ ಸಂಜಯನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.