Advertisement
ಪ್ರತಿ ಬಾರಿಯೂ ಹಳೆಯ ಸಿದ್ಧಸೂತ್ರಗಳನ್ನು ಕೆಡವಿ, ಹೊಸದನ್ನು ಕಟ್ಟುತ್ತಾ, ಹೊಸ ಪ್ರಯತ್ನಕ್ಕೆ ಒಗ್ಗಿಕೊಳ್ಳುವ ರಕ್ಷಿತ್ ಈ ಬಾರಿಯೂ “ಅವನೇ ಶ್ರೀಮನ್ನಾರಾಯಣ’ದಲ್ಲೂ ಆ ಪ್ರಯತ್ನ ಮುಂದುವರೆಸಿದ್ದಾರೆ. ಗಾಂಧಿನಗರದ ಸಿದ್ಧಸೂತ್ರಗಳನ್ನು ಮುಲಾಜಿಲ್ಲದೇ ಬದಿಗೆ ಸರಿಸಿ, ಹೊಸ ಬಗೆಯಲ್ಲಿ ಸಿನಿಮಾ ಕಟ್ಟಿ ಕೊಟ್ಟ ತಂಡದ ಶ್ರಮವನ್ನು ಮೆಚ್ಚಬೇಕು. ಅದೇ ಕಾರಣದಿಂದ ಮೂರು ವರ್ಷಗಳ ನಂತರ ತೆರೆಮೇಲೆ ಬಂದ ರಕ್ಷಿತ್ ಶೆಟ್ಟಿ ಯನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
Related Articles
Advertisement
ಇಲ್ಲಿ ಹೀರೋ ಕೆಲವೊಮ್ಮೆ ಸೂಪರ್ ಹೀರೋನಂತೆ ಕಂಡರೆ ಇನ್ನೊಮ್ಮೆ ಅದಕ್ಕೆ ವಿರುದ್ಧವಾಗಿ ಕಾಣುತ್ತಾನೆ. ಹಾಗಂತ ನೀವು ಇಲ್ಲಿ ಲಾಜಿಕ್ ಹುಡುಕದೇ ಆ ಕ್ಷಣದ ಮ್ಯಾಜಿಕ್‌ನ°ಷ್ಟೇ ಎಂಜಾಯ್ ಮಾಡಬೇಕು. ಚಿತ್ರದಲ್ಲಿ “ರಾಮ ರಾಮ ತುಸು ದಕ್ಷ ವೃತ ಜಾರಿಪಾ’ ಎಂಬ ನಾಟಕವೊಂದರ ಸಾಲು ಆಗಾಗ ಕೇಳಿಬರುತ್ತಲೇ ಇರುತ್ತದೆ. ಅದೇ ಸಿನಿಮಾದ ಕಥೆಯ ಮುಖ್ಯ ಅಂಶ ಕೂಡಾ. ಅದೇನೆಂಬುದನ್ನು ತೆರೆಮೇಲೆಯೇ ನೋಡಿ.
ಚಿತ್ರದ ಮೇಕಿಂಗ್ ಬಗ್ಗೆ ಹೇಳುವುದಾದರೆ ತುಂಬಾ ಅದ್ಧೂರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸೆಟ್‌ಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನಾರಾಯಣನೊಳಗೆ ಆದ್ಭುತವಾದ ಸೆಟ್‌ಗಳಿವೆ. ಸೆಟ್ ಮೂಲಕ ಒಂದು ಹೊಸ ಲೋಕವನ್ನೇ ಸೃಷ್ಟಿಸಲಾಗಿದೆ. ಇನ್ನು, ಚಿತ್ರದ ನಿರೂಪಣೆಯಲ್ಲಿ ಮತ್ತಷ್ಟು ಹರಿತಬೇಕಿತ್ತು ಎನಿಸದೇ ಇರದು. ಇಲ್ಲಿ ನೇರ ನಿರೂಪಣೆ ಇಲ್ಲ. ಮೂಲ ಕಥೆಗೆ ಲಿಂಕ್ ಕೊಡುವ ಅನೇಕ ಸನ್ನಿವೇಶಗಳು ಅಲ್ಲಲ್ಲಿ ಬರುತ್ತವೆ.
ಎಲ್ಲೋ ಒಂದು ಸನ್ನಿವೇಶಕ್ಕೆ ಸಂಬಂಧಿಸಿದ ಕೊಂಡಿಯನ್ನು ಇನ್ನೆಲ್ಲೋ ಇಟ್ಟಿರುತ್ತಾರೆ. ಈ ತರಹದ ಜಾಣ್ಮೆಯ ನಿರೂಪಣೆ ಇದ್ದರೂ ಸಾಮಾನ್ಯ ಪ್ರೇಕ್ಷಕನಿಗೆ ಒಮ್ಮೆಗೇ ಎಲ್ಲವನ್ನು ರೀಕಾಲ್ ಮಾಡಿಕೊಂಡು ಸನ್ನಿವೇಶ ಜೋಡಿಸೋದು ತುಸು ಕಷ್ಟ. ಜೊತೆಗೆ ಚಿತ್ರದ ಅವಧಿಯನ್ನು ಕಡಿತಗೊಳಿಸುವ ಅವಕಾಶವಿತ್ತು. ಅದರಾಚೆ ಹೇಳುವುದಾದರೆ ಒಂದು ಹೊಸ ಬಗೆಯ ಪ್ರಯತ್ನವಾಗಿ ಚಿತ್ರ ಇಷ್ಟವಾಗುತ್ತದೆ.
ಚಿತ್ರದಲ್ಲಿ ಬರುವ ಸೂಕ್ಷ್ಮ ಅಂಶಗಳ ಬಗ್ಗೆಯೂ ಚಿತ್ರತಂಡ ಗಮನಹರಿಸಿರುವುದು ತೆರೆಮೇಲೆ ಕಾಣುತ್ತದೆ. ನಿರ್ದೇಶಕ ಸಚಿನ್ ಅವರ ಚೊಚ್ಚಲ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಮುಖ್ಯವಾಗಿ ಇಡೀ ಕಥೆಯನ್ನು ಹೊತ್ತು ಸಾಗಿರೋದು ನಾಯಕ ನಟ ರಕ್ಷಿತ್ ಶೆಟ್ಟಿ. ನಾರಾಯಣ ಎಂಬ ಬುದ್ಧಿವಂತ ಪೊಲೀಸ್ ಆಫೀಸರ್ ಆಗಿ, ಶ್ರೀಹರಿಯಾಗಿ ಪಾತ್ರವನ್ನು ಎಂಜಾಯ್ ಮಾಡಿಕೊಂಡು ಮಾಡಿದ್ದಾರೆ. ಬುದ್ಧಿವಂತ, ಪ್ರೇಮಿ ಹೀಗೆ ರಕ್ಷಿತ್ ಇಷ್ಟವಾಗುತ್ತಾರೆ. ಅವರಿಗೆ ನಾಯಕಿ ಶಾನ್ವಿ ಸಾಥ್ ನೀಡಿದ್ದಾರೆ.
ಇಲ್ಲಿ ಕೇವಲ ಹೀರೋ ಪಾತ್ರಕ್ಕಷ್ಟೇ ಪ್ರಾಮುಖ್ಯತೆ ನೀಡಿಲ್ಲ. ಇತರೆ ಕೆಲವು ಪಾತ್ರಗಳನ್ನು ಕೂಡಾ ಅಷ್ಟೇ ಶಕ್ತಿಶಾಲಿಯಾಗಿ ಕಟ್ಟಿಕೊಡಲಾಗಿದೆ. ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಪಾತ್ರಗಳು ಕೂಡಾ ಹೀರೋ ಪಾತ್ರದ ಜೊತೆ ಜೊತೆಗೆ ಸಾಗುತ್ತವೆ. ಛಾಯಾಗ್ರಹಣ ಹಾಗೂ ಚಿತ್ರದ ಹಿನ್ನೆಲೆ ಸಂಗೀತ ಕಥೆ ಹಾಗೂ ಆ ವಾತಾವರಣಕ್ಕೆ ಹೊಸ ಮೆರುಗು ನೀಡಿದೆ. ಹೊಸ ಬಗೆಯ ಸಿನಿಮಾ ನೋಡಲಿಚ್ಛಿಸುವವರು ಒಮ್ಮೆ ನಾರಾಯಣನ ದರ್ಶನ ಪಡೆಯಲು ಅಡ್ಡಿ ಇಲ್ಲ.
ಚಿತ್ರ: ಅವನೇ ಶ್ರೀಮನ್ನಾರಾಯಣನಿರ್ಮಾಣ: ಪುಷ್ಕರ್ ಮಲ್ಲಿಕಾರ್ಜುನಯ್ಯ- ಪ್ರಕಾಶ್ ಎಚ್.ಕೆ
ನಿರ್ದೇಶನ: ಸಚಿನ್
ತಾರಾಗಣ: ರಕ್ಷಿತ್ ಶೆಟ್ಟಿ, ಶಾನ್ವಿ, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಮತ್ತಿತರರು. * ರವಿಪ್ರಕಾಶ್ ರೈ