ನಾರಾಯಣಪುರ: ಸಮೀಪದ ಜುಮಾಲಪುರ ದೊಡ್ಡ ತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮವನ್ನು ತಾಲೂಕು ಅಕ್ಷರ ದಾಸೋಹ ಅಧಿಕಾರಿ ಮೌನೇಶ ಕಂಬಾರ ಸಸಿಗೆ ನಿರೆರೆಯುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಹುಣಸಗಿ ತಾಲೂಕಿನ ಗಡಿ ಭಾಗದಲ್ಲಿರುವ ಜುಮಾಲಪುರ ದೊಡ್ಡ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಜಿಲ್ಲಾಮಟ್ಟದ ಉತ್ತಮ ಹಸಿರು ಶಾಲೆ ಪ್ರಶಸ್ತಿ ಪಡೆದುಕೊಂಡಿದೆ. ಶಿಕ್ಷಕರ ಹಾಗೂ ಮಕ್ಕಳ ಶ್ರಮದಿಂದ ಶಾಲಾ ವಾತಾವರಣ ಗಮನ ಸೆಳೆಯುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಪರಿಸರ ಉಳಿವಿಗಾಗಿ ಶ್ರಮಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಲಭ್ಯ ಸ್ಥಳದಲ್ಲಿ ಪುಟ್ಟ ಸಸಿಗಳನ್ನು ನೆಟ್ಟು, ಹಂತ ಹಂತವಾಗಿ ಬೆಳೆಯುವವರೆಗೂ ಅವುಗಳನ್ನು ರಕ್ಷಿಸುವುದು ಹಾಗೂ ಸಸಿಗಳನ್ನು ಮಕ್ಕಳಂತೆ ಕಾಪಾಡಿ ಕಾಲ ಕಾಲಕ್ಕೆ ನೀರುಣಿಸಿ, ದನ-ಕರು ತಿನ್ನದಂತೆ ತಂತಿ ಬೇಲಿ ಅಥವಾ ಮುಳ್ಳು ಅಳವಡಿಸುವತ್ತ ಗಮನ ಹರಿಸಿ ಪೋಷಿಸುವುದು ಅತೀ ಅಗತ್ಯ, ಶಾಲೆಯ ಮಕ್ಕಳಿಗೂ ಕೂಡ ಸಸಿ ಹಾಳಾಗದಂತೆ ನೋಡಿಕೊಳ್ಳುವ ಮನವರಿಕೆ ಪಾಠ ಕಲಿಸಬೇಕು ಎಂದರು.
ವನ ಮಹೋತ್ಸವ ಕಾರ್ಯಕ್ರಮ ನಿಮಿತ್ತ ಶಾಲೆಯ 450 ಮಕ್ಕಳಿಗೆ ನೋಟ್ಬುಕ್ ನೀಡಿ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಸಾಹುಕಾರ, ಮುಖ್ಯಗುರು ಅಚ್ಚಪ್ಪಗೌಡ ಗೌಡರ್, ಸಂಗಯ್ಯ ಬಾಚಿಹಾಳ, ಕಕ್ಕೇರಾ ಬೃಂದಾ ಗ್ಯಾಸ್ ಮುಖ್ಯಸ್ಥ ಸುಭಾಷ, ಬಿಆರ್‌ಪಿ ಕಾಂತೇಶ ಹಲಗಿಮನಿ, ಶ್ರೀಕಾಂತ, ಎ.ಬಿ. ಪೂಜಾರ, ಎಸ್.ಬಿ. ಪಂಜಗಲ್, ಭರತ ಕೋಣನವರ, ಮಲ್ಲಿಕಾರ್ಜುನ ಇಟಗಿ, ಮಂಜುನಾಥ ಚಾಮಲಾಪುರ, ಮಲ್ಲಿಕಾರ್ಜುನ ಹೊಳಿ, ಮೌನೇಶ ಹೂಗಾರ, ಶಕುಂತಲಾ ಹುಡೇದ, ರಾಜಕುಮಾರ ರಾಠೊಡ ಸೇರಿದಂತೆ ಅಡುಗೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.