ಬಸವಕಲ್ಯಾಣ: ನಾರಾಯಣಪುರ ಗ್ರಾಮ ಜಿಲ್ಲೆಯ ಮೊದಲ ಸಂಪೂರ್ಣ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಗ್ರಾಮ ಎನ್ನುವ ಗೌರವಕ್ಕೆ ಪಾತ್ರವಾಗಿದೆ ಎಂದು ಧಾರವಾಡ ವಲಯದ ಪೋಸ್ಟ್ ಮಾಸ್ಟರ್ ಜನರಲ್ ವೀಣಾ ಶ್ರೀನಿವಾಸ ಹೇಳಿದರು.
ಶನಿವಾರ ನಾರಾಯಣಪುರ ಗ್ರಾಮವನ್ನು ಸಂಪೂರ್ಣ ಅಂಚೆ ಪಾವತಿ ಬ್ಯಾಂಕ್ ಗ್ರಾಮ ಎಂದು ಘೋಷಿಸಿ ಮಾತನಾಡಿದ ಅವರು, ಗ್ರಾಮದಲ್ಲಿ 700ಕ್ಕೂ ಅಧಿಕ ಮನೆಗಳಿದ್ದು, ಪ್ರತಿ ಮನೆಯವರೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆದಿದ್ದಾರೆ. ಈ ಮೂಲಕ ಆನ್‌ಲೈನ್ ಬ್ಯಾಂಕಿಂಗ್, ನಗದು ರಹಿತ ವ್ಯವಹಾರದತ್ತ ಹೆಜ್ಜೆ ಇರಿಸಿದ್ದಾರೆ ಎಂದರು. ಗ್ರಾಮಸ್ಥರು ಮುಂದೆ ವಿದ್ಯುತ್ ಬಿಲ್ ಪಾವತಿ, ಮೊಬೈಲ್ ರಿಚಾರ್ಜ್ ಮೊದಲಾದ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿಯೇ ಮಾಡಲಿದ್ದಾರೆ ಎಂದು ಹೇಳಿದರು.
ಗ್ರಾಮದ ಅಂಚೆಪಾಲಕ ರಾಜೇಂದ್ರ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ 747 ಖಾತೆಗಳನ್ನು ತೆರೆದು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ. ಈಗಾಗಲೇ ಹೊಂದಿರುವ ಅಂಚೆ ಉಳಿತಾಯ ಖಾತೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿ, ಆನ್‌ಲೈನ್ ಬ್ಯಾಂಕಿಂಗ್‌ನ ಎಲ್ಲ ಸೌಲಭ್ಯಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ವಿಜಯಪುರದ ಅಂಚೆ ಅಧೀಕ್ಷಕ ರಘುನಾಥ ಸ್ವಾಮಿ ಮಾತನಾಡಿ, ಗ್ರಾಮದ ಜನರು ಪ್ರಗತಿಶೀಲ ಮನೋಭಾವ ಹೊಂದಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಜಿಲ್ಲಾ ವ್ಯವಸ್ಥಾಪಕ ಮಿರ್ಜಾ ಬೇಗ್ ಮಾತನಾಡಿ, ಸಾರ್ವಜನಿಕರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಭಾಲ್ಕಿ ಅಂಚೆ ನಿರೀಕ್ಷಕ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುವರ್ಣಾ ರವೀಂದ್ರ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ ನಿರೂಪಿಸಿದರು. ಹುಮನಾಬಾದ್ ಅಂಚೆ ನಿರೀಕ್ಷಕ ಲಕ್ಷ್ಮಿಕಾಂತ ಸ್ವಾಗತಿಸಿ, ವಂದಿಸಿದರು.