ನಾರಾಯಣಪುರ: ಬಸವಸಾಗರ ಜಲಾಶಯದಿಂದ 21 ಕ್ರಸ್ಟ್‌ಗೇಟ್‌ಗಳನ್ನು ತೆರೆದು ರವಿವಾರ ಬೆಳಗ್ಗೆ 2.71 ಲಕ್ಷ ಕ್ಯೂಸೆಕ್ ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ.
ಕಳೆದ ಒಂದು ವಾರದಿಂದಲು ನದಿ ಪಾತ್ರಕ್ಕೆ ಗರಿಷ್ಠ ಪ್ರಮಾಣದ ನೀರು ಬಿಡುಗಡೆ ಮಾಡಿದ್ದರಿಂದ ನದಿ ಪಾತ್ರದಲ್ಲಿ ಬರುವ ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದ್ದು, ನದಿ ಮಾರ್ಗವಾಗಿ ಬರುವ ಸೇತುವೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಅಣೆಕಟ್ಟು ಅಧಿಕಾರಿಗಳ ಮಾಹಿತಿಯಂತೆ ಪ್ರಸ್ತುತ ಜಲಾಶಯಕ್ಕೆ ಎಷ್ಟು ಒಳಹರಿವಿನ ಪ್ರಮಾಣ ಇದೆಯೋ ಅಷ್ಟೇ ಪ್ರಮಾಣದ ಹೊರಹರಿವನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರದ ಕೃಷ್ಣಾ ಜಲನಯನ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರೀ ಮಳೆ ಪ್ರಭಾವ ಕೃಷ್ಣಾ ನದಿಗೆ ಪ್ರವಾಹ ಉಂಟಾಗಿ ರಾಜ್ಯದ ಆಲಮಟ್ಟಿ ಹಾಗೂ ನಾರಾಯಣಪುರ ಉಭಯ ಜಲಾಶಯಗಳಿಗೆ ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಒಂದೊಮ್ಮೆ ಬಸವಸಾಗರಕ್ಕೆ ಒಳಹರಿವು ಹೆಚ್ಚಾದರೆ ಒಳಹರಿವಿನ ಪ್ರಮಾಣದಷ್ಟೆ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುವುದು ಎಂದು ಅಣೆಕಟ್ಟು ಮೂಲಗಳಿಂದ ತಿಳಿದು ಬಂದಿದೆ.
ಪ್ರಸ್ತುತ ಜಲಾಶಯ ಗರಿಷ್ಠ ಮಟ್ಟದಲ್ಲಿ 490.05 ಮೀಟರ್‌ಗೆ ನೀರು ಬಂದು ತಲುಪಿದ್ದು, 24.91 ಟಿಎಂಸಿ ಅಡಿ ನೀರು ಸಂಗ್ರಹವಿದೆ ಎಂದು ತಿಳಿದು ಬಂದಿದೆ.
ರಜೆದಿನ ಪ್ರವಾಸಿಗರ ದಂಡು: ರಜೆ ದಿನವಾದ ರವಿವಾರ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಬಸವಸಾಗರಕ್ಕೆ ಆಗಮಿಸಿ ಜಲಾಶಯದ ಕ್ರಸ್ಟ್‌ಗೇಟ್ ಮೂಲಕ ನದಿ ಪಾತ್ರಕ್ಕೆ ಹರಿಬಿಡಲಾದ ಭಾರೀ ಪ್ರಮಾಣದ ನೀರು ಹರಿಯುವ ಸೊಬಗನ್ನು ಕಣ್ತುಂಬಿಕೊಂಡರು. ಜಲಾಶಯ ವೀಕ್ಷಣೆಗಾಗಿ ಪ್ರವಾಸಿಗರ ತಂದಿದ್ದ ದ್ವಿಚಕ್ರ ಸೇರಿದಂತೆ ಇತರೆ ವಾಹನಗಳು ಜಲಾಶಯ ಮಾರ್ಗ ಸೇರಿದಂತೆ ಛಾಯಾ ಭಗವತಿ ರಸ್ತೆ ಮಾರ್ಗವಾಗಿ ಸಂಚರಿಸಿದ್ದರಿಂದ ಕೆಲ ಸಮಯದವರೆಗೆ ಎರಡು ರಸ್ತೆಗಳಿಗೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಸ್ಥಳೀಯ ಪೊಲೀಸ್ ಠಾಣೆ ಪಿಎಸೈ ಚಿದಾನಂದ ಕಾಶಪ್ಪಗೋಳ ನೇತೃತ್ವದ ಸಿಬ್ಬಂದಿಗಳು ವಾಹನ ದಟ್ಟನೆ ನಿಯಂತ್ರಿಸುವಲ್ಲಿ ಹರಸಾಹಸಪಟ್ಟು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.