Advertisement

ಸಾವಿರಕ್ಕೂ ಹೆಚ್ಚು ಶವಸಂಸ್ಕಾರಕ್ಕೆ ನೆರವಾದ ನಾರಾಯಣ

12:41 AM Oct 23, 2019 | sudhir |

ಉಡುಪಿ: ಹಾವಂಜೆ ಗ್ರಾಮದ ಕೀಳಂಜೆ ನಿವಾಸಿ ನಾರಾಯಣ ಎಸ್‌. ಪೂಜಾರಿ ಅವರು ಆಸು ಪಾಸಿನ ಯಾರೇ ಸತ್ತರೂ ಅಲ್ಲಿಗೆ ಹೋಗಿ ಶವಸಂಸ್ಕಾರ ನೆರವೇರಿಸಲು ನೆರವಾಗುತ್ತಾರೆ. ಹೀಗೆ ಇವರು ನೆರವಾದ ಶವಸಂಸ್ಕಾರ ಸಾವಿರಕ್ಕೂ ಮೀರಿದೆ.

Advertisement

30ರ ಪ್ರಾಯದಲ್ಲಿ ಆರಂಭ
ನಾರಾಯಣ ಎಸ್‌. ಪೂಜಾರಿ (57) ಬಡ ಕುಟುಂಬದಲ್ಲಿ ಬೆಳೆದವರು. ಆರ್ಥಿಕ ಸಮಸ್ಯೆಯಿಂದಾಗಿ ಪ್ರಾಥಮಿಕ ಶಿಕ್ಷಣ ಮೊಟಕುಗೊಳಿಸಿ ಬದುಕಿಗಾಗಿ ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. 30ರ ಹರೆಯದಲ್ಲಿ ಶವ ಸಂಸ್ಕಾರ ಮಾಡುವ ಕೈಂಕರ್ಯವನ್ನು ಆರಂಭಿಸಿದ ಇವರ ಸೇವೆಗೆ ಪತ್ನಿ, ಪುತ್ರಿ ಹಾಗೂ ಪುತ್ರ ಪ್ರೋತ್ಸಾಹ ನೀಡುತ್ತಿದ್ದಾರೆ.

ಶವ ಸಂಸ್ಕಾರಕ್ಕೆ ಮಾರ್ಗದರ್ಶನ
ನಾರಾಯಣ ಅವರು ಮೃತರ ಮನೆಗೆ ತೆರಳಿ ಶವ ಸಂಸ್ಕಾರಕ್ಕೆ ಅಗತ್ಯವಿರುವ ವಸ್ತುಗಳ ಕುರಿತು ಮಾಹಿತಿ ನೀಡುತ್ತಾರೆ. ಶವ ಸುಡಲು ಅಗತ್ಯವಿರುವ ಒಣ, ಹಸಿ ಮರಗಳನ್ನು ಗೆಳೆಯರ ಸಹಾಯದಿಂದ ತರಿಸಿಕೊಳ್ಳುತ್ತಾರೆ. ಮೃತ ದೇಹದ ಗಾತ್ರಕ್ಕೆ ಅಗತ್ಯವಿರುವ ಚಿತಾಗಾರ ನಿರ್ಮಿಸುತ್ತಾರೆ. ಮೃತನ ಮನೆಯವರು ಮಾಡಬೇಕಾದ ವಿಧಿವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಾರೆ.

ಬಾಲ್ಯದಿಂದಲೇ ತವಕ
ಚಿಕ್ಕಂದಿನಿಂದಲೇ ಶವ ಸಂಸ್ಕಾರದಲ್ಲಿ ಭಾಗಿಯಾಬೇಕು ಎನ್ನುವ ತವಕ ಅವರಲ್ಲಿ ಇತ್ತು. ಅದರೆ ಮನೆಯವರು ಅವಕಾಶ ನೀಡಿರಲಿಲ್ಲ. ಅಕ್ಕಪಕ್ಕದ ಮನೆಯವರು ಅಸುನೀಗಿದರೆ ಅವರ ಮನೆಗೆ ಹೋಗಿ ಶವ ಸಂಸ್ಕಾರ ಮಾಡುವ ವಿಧಾನ ನೋಡುತ್ತಿದ್ದರು.

ಇಂದು ಕುಟುಂಬಸ್ಥರು, ಸಂಬಂಧಿಕರು ಮೃತ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸಲು ಹೋಗಲು ಹಿಂಜರಿಯುವ ಕಾಲಘಟ್ಟದಲ್ಲಿ ತನ್ನವರಲ್ಲದಿದ್ದರೂ ಅವರ ಅಂತಿಮ ಸಂಸ್ಕಾರದಲ್ಲಿ ಸೇವೆಗೈಯುವ ಮೂಲಕ ನಿಜಕ್ಕೂ ಇತರರಿಗೆ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

Advertisement

ಆತ್ಮತೃಪ್ತಿ
ಸಮಾಜಕ್ಕೆ ಸೇವೆ ನೀಡಬೇಕು ಎನ್ನುವ ಹಂಬಲವಿತ್ತು. ಕಳೆದ 27 ವರ್ಷದಿಂದ ಮೃತರ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆತ್ಮ ತೃಪ್ತಿ ಕಂಡುಕೊಂಡಿದ್ದೇನೆ.
-ನಾರಾಯಣ ಎಸ್‌. ಪೂಜಾರಿ, ಸಮಾಜ ಸೇವಕ.

27 ವರ್ಷಗಳ ಸೇವೆ
ಕಳೆದ 27 ವರ್ಷಗಳಿಂದ ಸುಮಾರು 1,000ಕ್ಕೂ ಹೆಚ್ಚಿನ ಮಂದಿಯ ಅಂತಿಮ ಸಂಸ್ಕಾರದಲ್ಲಿ ತನ್ನಿಂದಾದ ಸೇವೆಯನ್ನು ನೀಡುತ್ತ ಬಂದಿದ್ದಾರೆ. ಗ್ರಾಮದಲ್ಲಿ ಯಾರೇ ಅಸುನೀಗಲಿ ಹೆಣ ಸುಡುವುದಕ್ಕೆ ಮುಂದೆ ಬರುತ್ತಾರೆ. ಅದಕ್ಕಾಗಿ ಅವರು ಮನೆಯವರಿಂದ ಹಣ ಸ್ವೀಕರಿಸುವುದಿಲ್ಲ. ಅಂತಿಮ ವಿಧಿವಿಧಾನಗಳನ್ನು ಚಾಚೂ ತಪ್ಪದೆ ನೆರವೇರಿಸುತ್ತಾರೆ. ಕೆಲ ಸಂದರ್ಭ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವ್ಯಕ್ತಿ ಮೃತರಾದರೆ ಆರ್ಥಿಕ ಸಹಾಯ ಸಹ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next