Advertisement

ಮಹಾರಾಷ್ಟ್ರ ಸ್ವಾಭಿಮಾನ್‌ ಪಕ್ಷ  ಹುಟ್ಟು ಹಾಕಿದ ರಾಣೆ 

03:52 PM Oct 02, 2017 | Team Udayavani |

ಮುಂಬಯಿ: ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರು ಮಹಾರಾಷ್ಟ್ರ ಸ್ವಾಭಿಮಾನ್‌ ಪಕ್ಷ ಎಂಬ ಹೊಸ ರಾಜಕೀಯ ಪಕ್ಷವೊಂದನ್ನು ಆರಂಭಿಸಿದ್ದಾರೆ.

Advertisement

ಮಹಾರಾಷ್ಟ್ರ ಸ್ವಾಭಿಮಾನ್‌ ಪಕ್ಷ ಎನ್ನುವ ಹೊಸ ರಾಜಕೀಯ ಸಂಘಟನೆಯೊಂದನ್ನು ನಾನು ಆರಂಭಿಸಿದ್ದು,ಪಕ್ಷದಲ್ಲಿ ಜನರ ಸೇರ್ಪಡೆಗಾಗಿ ನಿರೀಕ್ಷಿಸುತ್ತಿದ್ದೇನೆ. ತದನಂತರ, ಭವಿಷ್ಯದ ನಡೆಯ ಬಗ್ಗೆ ಯೋಚಿಸಲಿದ್ದೇನೆ ಎಂದು ಕೊಂಕಣದ 65ರ ಹರೆಯದ ಬಲಿಷ್ಠ ರಾಜಕೀಯ ನಾಯಕ ರಾಣೆ ಅವರು ರವಿವಾರ ಇಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಆಯೋಜಿಸಿ, ಘೋಷಣೆ ಮಾಡಿದ್ದಾರೆ.

ಮಾಜಿ ಕಾಂಗ್ರೆಸಿಗ ನಾರಾಯಣ್‌ ರಾಣೆ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳ ಕೆಲವು ದಿನಗಳ ಬಳಿಕ ರಾಣೆ  ಅವರಿಂದ ಈ ನಡೆಯು ಹೊರಬಂದಿರು ವುದಾಗಿದೆ. ಕಳೆದ ವಾರ ರಾಣೆ ಅವರು ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಣೆ ಅವರು, ಶೀಘ್ರವೇ ಹೊಸ ಪಕ್ಷದ ನೋಂದಣಿ ಮಾಡಲಾಗುವುದು. ಒಂದೊಮ್ಮೆ ಎನ್‌ಡಿಎಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಸ್ತಾವ ಬಂದರೆ, ಪಕ್ಷವು ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಅಶೋಕ್‌ ಚವಾಣ್‌ ಅವರನ್ನು ಹೊರತು ಪಡಿಸಿ ಉಳಿದ ಎಲ್ಲರೂ ತನ್ನ ಆಪ್ತರಾಗಿದ್ದಾರೆ ಎಂದೂ ಅವರು ನುಡಿದಿದ್ದಾರೆ. ಎಂಎನ್‌ಎಸ್‌ ಬಗ್ಗೆ ಮಾತನಾಡಿದ ಅವರು, ಅದು ಮಾಧ್ಯಮಗಳಿಂದಾಗಿ ಬದುಕುಳಿದಿರುವ ಪಕ್ಷವಾಗಿದೆ ಎಂದು ಅಣಕವಾಡಿದ್ದಾರೆ. ಶಿವಸೇನೆಯನ್ನು ಗುರಿಯಾಗಿಸಿಕೊಂಡ ರಾಣೆ ಅವರು, ಶಿವಸೇನೆ ಯಾವತ್ತೂ ಅಧಿಕಾರದಿಂದ ಹೊರನಡೆಯಲ್ಲ. ಅದು ಆಡಳಿತದ ಸುಖವನ್ನು ಅನುಭೋಗಿಸುವ ಜೊತೆಗೆ ವಿಪಕ್ಷ ಪಾತ್ರವನ್ನೂ ಚೆನ್ನಾಗಿ ನಿಭಾಯಿಸುತ್ತಿದೆ ಎಂದು ಟೀಕಿಸಿದ್ದಾರೆ.

Advertisement

ಉದ್ಧವ್‌ ಠಾಕ್ರೆ ಅವರು ಸರಕಾರದ ನಿರ್ಣಯಗಳನ್ನು ಟೀಕಿಸುತ್ತಾರೆ. ಆದರೆ, ಅವರ ಪಕ್ಷದ ಸಚಿವರು ಸಚಿವ ಸಂಪುಟ ಸಭೆಗಳಲ್ಲಿ ಆ ಬಗ್ಗೆ ಯಾವುದೇ ಮಾತುಗಳನ್ನಾಡಲ್ಲ ಎಂದಿದ್ದಾರೆ. 

ಉದ್ಧವ್‌ ಠಾಕ್ರೆ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್‌ ಪವಾರ್‌ ಅವರನ್ನು ಟೀಕಿಸುವ ಮೊದಲು ತಾವು(ಉದ್ಧವ್‌) ಆತ್ಮಾವಲೋಕನ ಮಾಡಿಕೊಳ್ಳುವ ಆವಶ್ಯಕತೆಯಿದೆ ಎಂದು ನುಡಿದಿದ್ದಾರೆ.

ಆಡಳಿತದಲ್ಲಿ ಹಕ್ಕುದಾರ ಆಗಿರುವ ಹೊರತಾಗಿಯೂ ಶಿವಸೇನೆ ಏನೂ ಮಾಡಿಲ್ಲ. ಮುಂಬಯಿಯಲ್ಲಿ ಮರಾಠಿಗರ ಸಂಖ್ಯೆ ಕಡಿಮೆ ಆಗಲು ಶಿವಸೇನೆಯೇ ಹೊಣೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ತನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಆಶ್ವಾಸನೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ರಾಣೆ ಅವರು ಕಳೆದು ತಿಂಗಳು  ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಈ  ಪಕ್ಷಕ್ಕೆ  ಸೇರುವುದಕ್ಕೂ ಮೊದಲು ಅವರು  ಶಿವಸೇನೆಯಲ್ಲಿದ್ದರು. ಶಿವಸೇನೆ ಪ್ರಮುಖ ಬಾಳಾ ಸಾಹೇಬ್‌ ಠಾಕ್ರೆ ಅವರು 1999ರಲ್ಲಿ ರಾಣೆ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ತದನಂತರ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ ಬಳಿಕ ರಾಣೆ ಅವರು ಕೇಸರಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಪಾಳಯವನ್ನು ಸೇರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next