ಬೀದರ: ಕೋವಿಡ್ ಸೊಂಕಿನಿಂದ ಮೃತಪಟ್ಟಿರುವ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ಶುಕ್ರವಾರ ಸ್ವಕ್ಷೇತ್ರ ಬಸವಕಲ್ಯಾಣ ನಗರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಕೋಲಿ (ಕಬ್ಬಲಿಗ) ಸಮಾಜದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ಶ್ರೀ ರತ್ನಾಕರ ಸ್ವಾಮಿಗಳು ವಿಧಿ ವಿಧಾನಗಳು ನಡೆಸಿಕೊಟ್ಟರು.
ಕೋವಿಡ್ ಸೋಂಕು ಪತ್ತೆಯಾದ ಹಿನ್ನಲೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ನಿಷ್ಕ್ರೀಯಗೊಂಡಿದ್ದರಿಂದ ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದರು.
ಕೋವಿಡ್ ಮಾರ್ಗಸೂಚಿಯಂತೆ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ನಡೆಯಿತು.
ನಾರಾಯಣರಾವ್ ಅವರ ಪತ್ನಿ ಮಾಲಾ, ಮಕ್ಕಳಾದ ಗೌತಮ ಮತ್ತು ರಾಹುಲ್, ಹಾರಕೂಡದ ಶ್ರೀ ಚನ್ನವೀರ ಶಿವಾಚಾರ್ಯರು, ಗುರುಬಸವ ಪಟ್ಟದ್ದೇವರು, ಸಂಸದರಾದ ಉಮೇಶ ಜಾಧವ, ಮಲ್ಲಿಕಾರ್ಜುನ ಖೂಬಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪುರ್, ಮಾಜಿ ಸಚಿವ ಯು.ಟಿ ಖಾದರ್, ಎಂಎಲ್ಸಿಗಳಾದ ವಿಜಯ ಸಿಂಗ್, ಡಾ. ಚಂದ್ರಶೇಖರ ಪಾಟೀಲ, ಪ್ರಮುಖರಾದ ಬಾಬು ಹೊನ್ನಾನಾಯಕ, ಶರಣು ಸಲಗರ, ಅನೀಲ ಭೂಸಾರೆ, ಡಿಸಿ ರಾಮಚಂದ್ರನ್ ಆರ್.,ಸಿಇಒ ಗಂಗವಾರ್, ಎಸ್.ಪಿ ಡಿಎಲ್ ನಾಗೇಶ ಇನ್ನಿತರರು ಇದ್ದರು.
ಅಗಲಿದ ನಾಯಕನ ದರ್ಶನಕ್ಕಾಗಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಸಮಾಜದ ಜನ ಸೇರಿದ್ದರು. ಆದರೆ, ಕೋವಿಡ್ ಹಿನ್ನಲೆ ಯಾರಿಗೂ ದರ್ಶನಕ್ಕೆ ಅವಕಾಶ ನೀಡಲಿಲ್ಲ.