ಮಂಡ್ಯ: 2023ಕ್ಕೆ ನಾರಾಯಣಗೌಡ ಮತ್ತೆ ಬಾಂಬೆಗೆ ಹೋಗುತ್ತಾನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಏಕವಚನದಲ್ಲಿ ತಿರುಗೇಟು ನೀಡಿದ್ದಾರೆ. ಕೆ.ಆರ್.ಪೇಟೆಯಲ್ಲಿ ಮಾತನಾಡಿ, ಬಿಜೆಪಿಯವರ ಆಟ ಕ್ಷೇತ್ರದಲ್ಲಿ ಹೆಚ್ಚು ಕಾಲ ನಡೆಯುವುದಿಲ್ಲ. ನಮ್ಮ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರೋಲ್ಲ. 2023ಕ್ಕೆ ನಾರಾಯಣಗೌಡ ಮತ್ತೆ ಬಾಂಬೆಗೆ ಹೋಗುತ್ತಾನೆ.
ಜೆಡಿಎಸ್ ಕಾರ್ಯಕರ್ತರು, ಮುಖಂಡರು ನಾರಾಯಣಗೌಡನಿಗೆ ಹೆದರಬೇಕಿಲ್ಲ. ಏಕೆಂದರೆ ಎರಡು ಅವಧಿಗೆ ಶಾಸಕರನ್ನಾಗಿ ಗುರುತು ಮಾಡಿ ಅವನಿಗೊಂದು ರೂಪ ನೀಡಿದವರು ನೀವಾಗಿದ್ದೀರಿ. ಆತ ಸಾಯುವವರೆಗೂ ಜೆಡಿಎಸ್ ಪಕ್ಷಕ್ಕೆ ಋಣಿಯಾಗಿರಬೇಕು. ದೇವೇಗೌಡರು ಹಾಗೂ ಕುಮಾರಣ್ಣನ ಫೋಟೋ ಇಟ್ಟುಕೊಂಡು ಪೂಜೆ ಮಾಡಬೇಕು. ಹೋಟೆಲ್ ವ್ಯಾಪಾರಿಯನ್ನು ಕರೆದುಕೊಂಡು ಬಂದು ಎರಡು ಅವಧಿಗೆ ಶಾಸಕರನ್ನಾಗಿ ಮಾಡಿದ್ದಕ್ಕೆ ನಮ್ಮ ಕುಟುಂಬಕ್ಕೆ ಹಾಗೂ ತಾಲೂಕಿನ ಜನತೆಗೆ ಒಳ್ಳೆಯ ಉಪಕಾರವನ್ನೇ ನಾರಾಯಣಗೌಡ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಸೇಡಿನ ರಾಜಕಾರಣ ಮಾಡಿದರೆ ಅದನ್ನು ಹೇಗೆ ಮಟ್ಟ ಹಾಕಬೇಕು ಎನ್ನುವುದು ನನಗೆ ಗೊತ್ತಿದೆ. ನಾರಾಯಣಗೌಡ ಏನು ಮಾಡ್ತಾನೋ ನೋಡೋಣ, ಕಾಲವೇ ಎಲ್ಲಕ್ಕೂ, ಎಲ್ಲರಿಗೂ ಉತ್ತರ ಕೊಡುತ್ತದೆ. ಎಂತೆಂಥವರನ್ನೋ ನೋಡಿದ್ದೇನೆ. ಈ ನಾರಾಯಣಗೌಡ ನನಗೆ ಯಾವ ಲೆಕ್ಕ. ಹಣದ ರಾಜಕಾರಣ ಎಷ್ಟು ದಿನ ನಡೆಯುವುದೋ ನಾನೂ ನೋಡ್ತೇನೆ ಎಂದು ರೇವಣ್ಣ ಗುಟುರು ಹಾಕಿದರು.
ನಮ್ಮ ಸೋಲಿಗೆ ಒಳ ಏಟು ಒಂದು ಕಾರಣವಾದರೆ ಒಂದು ಸಾವಿರ ಜನರು ಹೊರಗಿನಿಂದ ಕ್ಷೇತ್ರದೊಳಗೆ ಬಂದು ಹಣ ಹಂಚಿರುವುದು ಮತ್ತೊಂದು ಕಾರಣ. ಈಗ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯವರು ಒಂದೊಂದು ಕ್ಷೇತ್ರಕ್ಕೆ 50 ರಿಂದ 60 ಕೋಟಿ ರೂ.ಹಣ ಖರ್ಚು ಮಾಡಿದ್ದಾರೆ. 15 ಕ್ಷೇತ್ರಗಳಿಂದ ಬರೋಬ್ಬರಿ 750 ಕೋಟಿ ರೂ.ಖರ್ಚು ಮಾಡಿದ್ದಾರೆ. ಇದನ್ನು ಬಿಜೆಪಿ ಮುಖಂಡರೇ ಹೇಳಿದ್ದಾಾರೆ.
-ರೇವಣ್ಣ, ಮಾಜಿ ಸಚಿವ