ಮಂಡ್ಯ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಶುರುವಾಗಿದ್ದು, ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಕಮಲ ಅರಳಿಸಿ ಇತಿಹಾಸ ಬರೆದಿದ್ದ ಕೆ.ಸಿ.ನಾರಾಯಣ ಗೌಡ ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಈಗಾಗಲೇ ಮಾತುಕತೆ ನಡೆದಿದ್ದು, ಕೆ.ಆರ್. ಪೇಟೆಯ ಪ್ರಜಾಧ್ವನಿ ಯಾತ್ರೆಯಲ್ಲಿ ಸೇರ್ಪಡೆಗೊಳ್ಳಲು ತಯಾರಿ ನಡೆದಿದೆ.
ಈಗಾಗಲೇ ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ನಾರಾಯಣ ಗೌಡ ಹೋಬಳಿವಾರು ಸಭೆ ನಡೆಸುತ್ತಾ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಸಂಕಲ್ಪಯಾತ್ರೆಯಲ್ಲಿ ಕಾಣಿಸಿಕೊಳ್ಳದ ಸಚಿವ
ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ನಡೆದ ವಿಜಯ ಸಂಕಲ್ಪ ಯಾತ್ರೆ ಯಲ್ಲಿ ನಾರಾಯಣ ಗೌಡ ಕಾಣಿಸಿಕೊಳ್ಳಲಿಲ್ಲ. ಕೆ.ಆರ್. ಪೇಟೆ ಯಲ್ಲಿ ನಡೆದ ಯಾತ್ರೆಯಲ್ಲಿ ಕಾಟಾ ಚಾರಕ್ಕೆಂಬಂತೆ ಕಾಣಿಸಿ ಕೊಂಡರು. ಅಲ್ಲದೆ, ನಿರೀಕ್ಷಿತ ಮಟ್ಟದಲ್ಲಿ ಜನರು ಇಲ್ಲದ ಪರಿಣಾಮ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅರ್ಧದಲ್ಲಿಯೇ ಯಾತ್ರೆ ಮೊಟಕುಗೊಳಿಸಿ ರಥಯಾತ್ರೆ ವಾಹನದಿಂದಿಳಿದು ಹೋಗಿದ್ದಾರೆ.
Related Articles
ಬೆಂಬಲಿಗರ ಮೂಲಕ ಸರ್ವೇ
ಹೋಬಳಿವಾರು ಸಭೆ ನಡೆಸುತ್ತಿರುವ ನಾರಾಯಣ ಗೌಡ ತಮ್ಮ ಬೆಂಬಲಿಗರ ಮೂಲಕ ಸರ್ವೇ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾದರೆ ಜನರ ಪ್ರತಿಕ್ರಿಯೆ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಸೇರ್ಪಡೆಯಾದರೆ ಚುನಾವಣೆಯಲ್ಲಿ ಜೆಡಿಎಸ್ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮುಖಂಡರಿಗೆ ಗಾಳ ಹಾಕಲು ಮುಂದಾಗಿದ್ದಾರೆ.
ಕೆಬಿಸಿ ಬೆಂಬಲಿಗರ ವಿರೋಧ
ನಾರಾಯಣ ಗೌಡ ಕಾಂಗ್ರೆಸ್ ಸೇರುವುದಕ್ಕೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಉಳಿದ ಕಾರ್ಯಕರ್ತರು ಮೌನ ವಹಿಸಿದ್ದಾರೆ.
ಪ್ರಜಾಧ್ವನಿ ಯಾತ್ರೆ ಮುಂದೂಡಿಕೆ
ಪ್ರಜಾಧ್ವನಿ ರಥಯಾತ್ರೆಯಲ್ಲಿ ನಾರಾಯಣ ಗೌಡ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿತ್ತು. ಆದರೆ ಪೂರ್ವಭಾವಿ ಸಭೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.