Advertisement

113 ವರ್ಷಗಳ ಇತಿಹಾಸದ ನಾರಾವಿ ಸರಕಾರಿ ಶಾಲೆ

06:15 PM Nov 08, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1906 ಶಾಲೆ ಆರಂಭ
ಮರದ ಅಡಿಯಲ್ಲಿ ಆರಂಭವಾಗಿ, ಅಭಿವೃದ್ಧಿ ಹೊಂದಿದ ಶಾಲೆ.

ವೇಣೂರು: ಬ್ರಿಟಿಷ್‌ ಆಡಳಿತ ವ್ಯವಸ್ಥೆಯಲ್ಲಿ ಆಗಿನ ಬ್ರಿಟನ್‌ ರಾಜ 5ನೇ ಜಾರ್ಜ್‌ ಕಿಂಗ್‌ನ ಕಾಲದಲ್ಲಿ ಇಲ್ಲಿನ ಪ್ರಧಾನ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವಠಾರದಲ್ಲಿ 1906ರ ಜೂ. 30ರಂದು ನಾರಾವಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿತು. ಅಂದಿನ ವಿದ್ಯಾಭಿಮಾನಿಗಳ ಪರಿಶ್ರಮದಿಂದ ಸರಿಸುಮಾರು 15 ವಿದ್ಯಾರ್ಥಿಗಳನ್ನು ಸೇರಿಸಿ ಓರ್ವ ಶಿಕ್ಷಕರೊಂದಿಗೆ ಒಂದು ಮರದ ಅಡಿಯಲ್ಲಿ ಶಾಲೆ ಪ್ರಾರಂಭವಾಯಿತು. ಬಾಬುರಾವ್‌ ಅವರ ಪ್ರಯತ್ನದಿಂದ ಮರದಡಿಯಲ್ಲಿ ಪ್ರಾರಂಭಿಸಲಾದ ಶಾಲೆಯನ್ನು ಬಳಿಕ ನಾರಾವಿ ಹೃದಯ ಭಾಗದ ಸ್ಥಳದಲ್ಲಿ ಒಂದು ಮುಳಿ ಹುಲ್ಲಿನ ಛಾವಣಿಯಲ್ಲಿ ಮುಂದುವರಿಸಿದರು.

ಸಾಗಿ ಬಂದ ಹಾದಿ
1906ರಿಂದ 1-5ನೇ ತರಗತಿವರೆಗೆ, 1951ರಿಂದ 7ನೇ ತರಗತಿವರೆಗೆ ವಿಸ್ತರಿಸಲಾಯಿತು. 1973ರಲ್ಲಿ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಾಗಿ ಪರಿವರ್ತನೆಗೊಂಡಿತು. 2007ರಲ್ಲಿ ಶಾಲೆಯನ್ನು ಉನ್ನತೀಕರಿಸಿ 8ನೇ ತರಗತಿ ಆರಂಭಗೊಂಡಿತು. 2010ರಿಂದ ಪ್ರೌಢಶಾಲೆಯಾಗಿ ಮಾರ್ಪಟ್ಟಿತು. ಊರವರ ಬೇಡಿಕೆಯಂತೆ 2018ರಲ್ಲಿ ಪ್ರತ್ಯೇಕ ಕಟ್ಟಡ ನಿರ್ಮಿಸಿ ಪ್ರೌಢಶಾಲೆಯನ್ನು ಬೇರ್ಪಡಿಸಲಾಗಿದೆ. 2008ರ ಜನವರಿಯಲ್ಲಿ 100 ವರ್ಷ ಪೂರೈಸಿ ಶತಮಾನೋತ್ಸವವನ್ನು ಆಚರಿಸಿದೆ. 15 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 228 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಸಮೂಹ ಸಂಪನ್ಮೂಲ ಕೇಂದ್ರ
ನಾರಾವಿ ಶಾಲೆ 1.63 ಎಕ್ರೆ ಜಾಗವನ್ನು ಹೊಂದಿದೆ. ನಾರಾವಿ, ಕುತ್ಲೂರು, ಮರೋಡಿ, ಸಾವ್ಯ, ಕಾರ್ಕಳ ತಾಲೂಕಿನ ಹೊಸ್ಮಾರು, ಮೂಡುಬಿದಿರೆಯ ಮಾಂಟ್ರಾಡಿಯಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾರ್ಜನೆಗೆ ಬರುತ್ತಿದ್ದಾರೆ. ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದ್ದು, ಉಳಿದಂತೆ ಎಲ್ಲ ಶಿಕ್ಷಕರ ಹುದ್ದೆ ಭರ್ತಿ ಇದೆ. ತರಗತಿ ಕೊಠಡಿಗಳು ವ್ಯವಸ್ಥಿತವಾಗಿವೆ. ನಾರಾವಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ಕೇಂದ್ರ ಇಲ್ಲಿ ಕಾರ್ಯಾಚರಿಸುತ್ತಿದೆ. 8 ತರಗತಿ ಕೊಠಡಿಗಳು, ಹಾಲ್‌, ಮುಖ್ಯ ಶಿಕ್ಷಕರ ಕೊಠಡಿ, ಶಿಕ್ಷಕರ ಕೊಠಡಿ, ಪ್ರಯೋಗಾಲಯ, ವಾಚನಾಲಯ ಇದೆ. ಆಟದ ಮೈದಾನ, ಶೌಚಾಲಯ, ರಂಗಮಂದಿರ, ಬಾವಿ, ಕೊಳವೆ ಬಾವಿ, ತರಕಾರಿ ತೋಟ, ತೆಂಗಿನ ಮರ, ಹೂತೋಟ ಇಲ್ಲಿದೆ. ಶಾಸಕ ಹರೀಶ್‌ ಪೂಂಜ ಅವರ ಮುತುರ್ವಜಿಯಿಂದ ಎಂಆರ್‌ಪಿಎಲ್‌ ಸಂಸ್ಥೆಯಿಂದ 10 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣಕ್ಕೆ ಜಾಗ ಸಮತಟ್ಟುಗೊಳಿಸಲಾಗಿದ್ದು, ಶೀಘ್ರ ನಿರ್ಮಾಣ ಆಗಲಿದೆ.

Advertisement

ಹಳೆ ವಿದ್ಯಾರ್ಥಿಗಳ ಸಾಧನೆ
ಮಂಗಳೂರು ಕೆಎಂಸಿಯ ಖ್ಯಾತ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್‌, ಮೂಡುಬಿದಿರೆ ಎಕ್ಸಲೆಂಟ್‌ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಯುವರಾಜ್‌ ಜೈನ್‌, ಇದೇ ಶಾಲೆಯ ಶಿಕ್ಷಕರಾದ ಪ್ರಭಾಕರ ಎನ್‌., ಪ್ರೇಮಾ ಬಿ., ನಿರ್ಮಲ್‌ ಕುಮಾರ್‌, ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಸುಬ್ರಹ್ಮಣ್ಯ ಭಟ್‌ ಮತ್ತಿತರ ಹಳೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

113 ವರ್ಷಗಳ ಇತಿಹಾಸದಲ್ಲಿ ಖಾಸಗಿ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯ ನಡುವೆಯೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಬೋಧಕ ವೃಂದದೊಂದಿಗೆ ಗ್ರಾಮಸ್ಥರ, ದಾನಿಗಳ, ಜನಪ್ರತಿನಿಧಿಗಳ ಸಹಕಾರದಿಂದ ಶಾಲೆ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ.
-ಮಮತಾ ಬಿ., ಪ್ರಭಾರ ಮುಖ್ಯ ಶಿಕ್ಷಕಿ

ನಾರಾವಿ ಶಾಲೆಯಲ್ಲಿ 1976ರಿಂದ 1979ರ ಬಾಲ್ಯದ ಅನುಭವ ಅವಿಸ್ಮರಣೀಯ ವಾಗಿದೆ. ದಿ| ವಜ್ರನಾಭ, ದಿ| ಭೋಜ ಮೇಸ್ಟ್ರ ನೆನಪು ಸದಾ ಇದೆ. ಬಾಲ್ಯದ ಹಾದಿಯಲ್ಲಿ ಸರಕಾರಿ ಶಾಲೆಯಲ್ಲಿ ಕಲಿತ ಬುನಾದಿ ಇಂದಿಗೂ ಭದ್ರವಾಗಿದೆ.
-ಡಾ| ಪದ್ಮನಾಭ ಕಾಮತ್‌,
ಹೃದ್ರೋಗ ವಿಭಾಗದ ಮುಖ್ಯಸ್ಥರು ಕೆಎಂಸಿ ಆಸ್ಪತ್ರೆ, ಮಂಗಳೂರು (ಹಳೆ ವಿದ್ಯಾರ್ಥಿ)

-  ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next