ಬೆಟ್ಟದೊಳಗೆ ಒಂದು ಸುದೀರ್ಘ ಗುಹೆ. ಒಳಗೆ ಕಾಲಿಟ್ಟಲ್ಲೆಲ್ಲ ನೀರೋ ನೀರು. ಅರ್ಧಶರೀರ ಮುಳುಗುವಷ್ಟು ಇರುವ ನೀರಿನಲ್ಲಿ ಹೆಜ್ಜೆ ಇಡುತ್ತಾ, ಮುಂದೆ ಸಾಗಿದರೆ, ಅಲ್ಲಿ ಝರಣಿ ನರಸಿಂಹನ ದರ್ಶನ. ಆ ನರಸಿಂಹ ಕೂಡ ನೀರಿನಲ್ಲೇ ನೆಲೆನಿಂತವನು! ಈ ಅಪರೂಪದ ಭಕ್ತಿಯ ಪುಳಕಕ್ಕೆ ಸಾಕ್ಷಿ ಬರೆದಿರುವುದು, ಗಡಿಜಿಲ್ಲೆಯಾದ ಬೀದರ್.
ಇಲ್ಲಿರುವ ಝರಣಿ ನರಸಿಂಹ ಸ್ವಾಮಿಯ ಪುಣ್ಯಕ್ಷೇತ್ರ, ಕರ್ನಾಟಕವಲ್ಲದೆ, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭಕ್ತರನ್ನೂ ಸೆಳೆಯುತ್ತಿದೆ. ಗುಹೆಯೊಳಗೆ ಎಷ್ಟೇ ನೀರಿರಲಿ, ಸದ್ಭಕ್ತರು “ಗೋವಿಂದ ಗೋವಿಂದ’ ಎಂದು ಭಜಿಸುತ್ತಾ, ಆತನ ದರುಶನ ಪಡೆಯುತ್ತಾರೆ. “ಝರಾ’ ಅಂದರೆ ನೀರು. ಈ ಝರಣಿ ಬೆಟ್ಟವು ಹಚ್ಚಹಸಿರಿನಿಂದ ಕೂಡಿದೆ. ಶನಿವಾರ, ಸೋಮವಾರ ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅಂದು ವಿಶೇಷ ಪೂಜೆ, ಅಭಿಷೇಕ, ನೈವೇದ್ಯಗಳು ನೆರವೇರುತ್ತವೆ.
ಈ ಕ್ಷೇತ್ರ, ಪುರಾಣ ಪ್ರಸಿದ್ಧ ತಾಣ. ಮಣಿಮಲ್ಲಾಸುರ ಮತ್ತು ಝರಾಸುರ ಎಂಬ ಇಬ್ಬರು ರಾಕ್ಷಸರು, ದೇವಾನುದೇವತೆಗಳಿಗೆ, ಕಾಟ ಕೊಡುತ್ತಿರುತ್ತಾರೆ. ಝರಾಸುರನು ಗುಹೆಯೊಳಗೆ, ಈಶ್ವರನನ್ನು ಪ್ರತಿಷ್ಠಾಪಿಸಿ, ಪೂಜಿಸುತ್ತಿದ್ದನು. ಅದೇ ಸಂದರ್ಭದಲ್ಲಿ ನರಸಿಂಹಸ್ವಾಮಿ, ಹಿರಣ್ಯ ಕಶ್ಯಪುವಿನ ವಧೆ ಮಾಡಿ, ನಂತರ ಈ ರಾಕ್ಷಸನನ್ನು ಸಂಹರಿಸಲು ಬಂದನಂತೆ. ಆದರೆ, ಝರಾಸುರನು ಈಶ್ವರನ ಭಕ್ತನಾಗಿದ್ದರಿಂದ, ಅದು ಸಾಧ್ಯವಾಗಲಿಲ್ಲ.
ಈತನ ಶಿವಭಕ್ತಿಯನ್ನು ಕಂಡು, “ನಿಂಗೇನಾದರೂ ವರ ಬೇಕಾದರೆ ಕೇಳು’ ಎಂದು ನರಸಿಂಹ ಕೇಳುತ್ತಾನೆ. ಆಗ ಝರಾಸುರ, “ಈ ಕ್ಷೇತ್ರ ನನ್ನ ಹೆಸರಿನಿಂದ ಪ್ರಖ್ಯಾತಿಯಾಗಬೇಕು. ಹಾಗೆಯೇ, ನೀನು ಇಲ್ಲಿಯೇ ನೆಲೆನಿಂತು, ನನ್ನನ್ನು ಲೋಕದ ಜನ ಆರಾಧಿಸುವಂತೆ ಮಾಡಬೇಕು’ ಎಂದು ಕೇಳಿಕೊಳ್ಳುತ್ತಾನೆ. “ಝರಣಿ ನರಸಿಂಹ’ ಕ್ಷೇತ್ರ ಉದಯಿಸುವುದು ಹೀಗೆ. “ಝರಾ’ ಅಂದರೆ ನೀರು. ಇಲ್ಲಿನ ಗುಹೆಯಲ್ಲಿ ಸದಾ ನೀರು ತುಂಬಿರುತ್ತದೆ.
ನೀರಿನೋಳಗೆ ನಡೆದುಕೊಂಡು ಹೋಗಿ, ಝರಣಿ ನರಸಿಂಹನ ದರ್ಶನ ಪಡೆಯಬೇಕು. ಈ ಗುಹೆಯ ನೀರಿನಲ್ಲಿ ನಡೆದರೆ, ಚರ್ಮರೋಗ ನಿವಾರಣೆ ಆಗುತ್ತದೆ ಎಂಬ ನಂಬಿಕೆಯೂ ಇದೆ. “ನೀರಿನಲ್ಲಿರುವ ಗಂಧಕವು ಚರ್ಮರೋಗಕ್ಕೆ ರಾಮಬಾಣ’ ಎಂದು ಇಲ್ಲಿನ ಪುರೋಹಿತರು ಅರ್ಥೈಸುತ್ತಾರೆ. ಮಕ್ಕಳು ಮಾತ್ರವಲ್ಲದೆ, ವರ್ಷದಲ್ಲಿ ಸಾವಿರಾರು ಭಕ್ತರು ಇಲ್ಲಿ ಕೇಶಮುಂಡನ ಮಾಡಿಸಿಕೊಳ್ಳುತ್ತಾರೆ.
ದರುಶನಕೆ ದಾರಿ…: ಬೀದರ್ ನಗರದಿಂದ ಈ ಕ್ಷೇತ್ರಕ್ಕೆ ಕೇವಲ 4 ಕಿ.ಮೀ. ದೂರ. ಸಿಟಿ ಬಸ್ಸಿನಲ್ಲಿ ತಲುಪಬಹುದು.
ಭಕ್ತರಿಗೆ ಸೂಚನೆ: ಝರಣಿ ಕ್ಷೇತ್ರದಲ್ಲಿ ದರುಶನಕ್ಕಾಗಿ, ನೀರಿನಲ್ಲಿ ನಡೆಯಬೇಕಿರುವುದರಿಂದ, ಬಟ್ಟೆ ಒದ್ದೆಯಾಗುತ್ತದೆ. ಭಕ್ತರು ಹೆಚ್ಚುವರಿಯಾಗಿ, ಇನ್ನೊಂದು ಉಡುಪನ್ನು ಜತೆಗಿಟ್ಟುಕೊಳ್ಳುವುದು ಒಳ್ಳೆಯದು.
* ರವಿಕುಮಾರ ಮಠಪತಿ