Advertisement

ಇಂಗ್ಲಿಷ್‌ನಲ್ಲಿ ನರಕಾಸುರ ಮೋಕ್ಷ

10:00 AM Oct 24, 2019 | mahesh |

ಯಕ್ಷನಂದನ ಕುಳಾಯಿ ತಂಡವು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾನಿಲಯದಲ್ಲಿ ನರಕಾಸುರ ಮೋಕ್ಷ ಯಕ್ಷಗಾನವನ್ನು ಇಂಗ್ಲೀಷ್‌ ಭಾಷೆಯಲ್ಲಿ ಪ್ರದರ್ಶಿಸಿತು. ಸಂಭಾಷಣೆ, ವಾದನ, ಹಿಮ್ಮೇಳ ಎಲ್ಲಾ ಆಂಗ್ಲ ಭಾಷೆಯಲ್ಲಿದ್ದು ಮೋಡಿ ಮಾಡಿತು.

Advertisement

ದೇವೇಂದ್ರ, ಅಗ್ನಿ, ವಾಯು, ಶ್ರೀಕೃಷ್ಣ, ಸತ್ಯಭಾಮೆ, ಮುರಾಸುರ, ನರಕಾಸುರನ ಮಾವ ಮತ್ತು ನರಕಾಸುರ ಇಷ್ಟೇ ಪಾತ್ರಗಳಲ್ಲಿ ಕಥೆ ಮೂಡಿಬಂದಿತ್ತು. ಒಂದೂವರೆ ಗಂಟೆ ಪ್ರೇಕ್ಷಕರು ಕಣ್ಣು ಕೀಳದಂತೆ ಮಂತ್ರಮುಗ್ಧರಾಗಿ ಕುಳಿತು ವೀಕ್ಷಿಸಿ, ಕೆಲವರು ಅನಿಸಿಕೆಗಳನ್ನೂ ಹೇಳಿದರು. ಪ್ರಶಾಂತ್‌ ಐತಾಳ್‌ ದೇವೇಂದ್ರನಾಗಿ ಒಡ್ಡೋಲಗವಿತ್ತರೆ, ನಂದನೇಶ ಹೆಬ್ಟಾರ್‌ ಹಾಗೂ ಸ್ಕಂದ ಕೊನ್ನಾರ್‌ ಅವರು ದೇವತೆಗಳಾಗಿ ದೇವರಾಜನಿಗೆ ಸಲಹೆ ಇತ್ತರು. ದೇವೇಂದ್ರ ನರಕಾಸುರನ ಪೀಡೆಯನ್ನು ನಿವಾರಿಸಲು ಆತನ ಮಾತಾಪಿತರೇ ಸರಿಯೆಂದು ತಿಳಿದು ದ್ವಾರಕೆಗೆ ಬಂದರು. ನರಕಾಸುರನಿಗೆ ವರವೇ ಹಾಗಿತ್ತು. ದೇವತೆಗಳ ಸೋಲು, ದೇವಮಾತೆ ಅದಿತಿ ದೇವಿಯ ಕರ್ಣಕುಂಡಲ ಮತ್ತು ವರುಣನ ಮಣಿಶೈಲದ ಸಹಿತ ಸುವಸ್ತುಗಳನ್ನೆಲ್ಲಾ ಒಯ್ದುದನ್ನು ಶ್ರೀಕೃಷ್ಣನಲ್ಲಿ ( ವರ್ಕಾಡಿ ರವಿ ಅಲೆವೂರಾಯ) ದೂರುತ್ತಾರೆ.ಅ

ಭಯ ಪಡೆದು ದೇವತೆಗಳು ಹಿಂತೆರಳುತ್ತಾರೆ. ಕೃಷ್ಣ ಯುದ್ಧಕ್ಕೆ ಹೊರಟಾಗ ಭಾಮೆ ಬಂದು ತಡೆಯುತ್ತಾಳೆ. ವೃಂದಾ ಕೊನ್ನಾರ್‌ ಅವರು ಸ್ತ್ರೀಪಾತ್ರದ ಸೂಕ್ಷ್ಮ, ನಯನಾಜೂಕುಗಳನ್ನು ಪ್ರದರ್ಶಿಸುತ್ತಾ ಬೇರೆ ಬೇರೆ ತಾಳಗಳಿಗೆ ಹೆಜ್ಜೆಹಾಕಿ ಕೌತುಕಗೊಳಿಸಿದರು. ಪ್ರಾಗೊತಿಷಕ್ಕೆ ಬಂದ ಕೃಷ್ಣ ಭಾಮೆಯರು, ಮುರಾಸುರನನ್ನು ವಧಿಸುತ್ತಾರೆ. ಡಾ|ಸತ್ಯಮೂರ್ತಿ ಐತಾಳರು ಮುರಾಸುರನ ಪಾತ್ರದಲ್ಲಿ ಪ್ರೌಢಿಮೆಯನ್ನು ಪ್ರದರ್ಶಿಸಿದರು. ಬಲಾನ್ವಿತ ಮಂತ್ರಿ ಮುರಾಸುರ ಅಳಿದ ವಾರ್ತೆಯನ್ನು ದೂತರು ನರಕನಿಗೆ ತಿಳಿಸುತ್ತಾರೆ. ಸಂದೇಶ ಚರನಾಗಿ ಸಂತೋಷ ಐತಾಳರು ಹಾಸ್ಯ ಮಾತುಗಳಿಂದ ರಂಜಿಸಿದರು. ನರಕಾಸುರನಾಗಿ ನಾಗೇಶ ಕಾರಂತರು ಅದ್ಭುತವಾಗಿ ನಟಿಸಿ ಕೇಶಾವರಿ ಪಾತ್ರವನ್ನು ಗೆಲ್ಲಿಸಿದರು.

ಶರಣಾಗುವ ದೃಶ್ಯದಲ್ಲಂತೂ ಬಿಕ್ಕಳಿಸಿ ಅಳುತ್ತಾ ಪ್ರೇಕ್ಷಕರಲ್ಲೂ ಅಳುಮೂಡಿಸಿ ನರಕನನ್ನು ಸಾಯಿಸಿದರು. ತಂದೆ ತಾಯಿಯರ ರಕ್ಷಣೆ ಇಲ್ಲದೆ ಬೆಳೆಯುವ ಮಗು ಹೇಗೆ ಅದಕ್ಷನಾಗಿ-ಅಧರ್ಮಿಯಾಗಿ ಸಮಾಜ ಕಂಟಕನಾಗುತ್ತಾನೆ ಎಂಬ ಸಂದೇಶವನ್ನು ನೀಡಿ, ಬದುಕು ನರಕನಂತಾಗಬಾರದೆಂಬ ಕಾರಣಕ್ಕೆ ಈ ದಿನಕ್ಕೆ ನರಕಚತುರ್ದಶಿಯಾಗಲಿ ಎಂದು ದೇವರಲ್ಲಿ ಬೇಡಿ ಮೋಕ್ಷಗಾಮಿಯಾಗುತ್ತಾನೆ. ಶ್ರೀಕೃಷ್ಣ – ಭಾಮೆಯರು ಆತನನ್ನು ಹರಸಿ 16,000 ರಾಜಕುಮಾರಿಯರನ್ನು ಸೆರೆಯಿಂದ ಬಿಡಿಸುತ್ತಾರೆ. ಅನಾಥರಾದ ಅವರಿಗೆ ನಾಥನಾಗಿ ಪತಿತೋದ್ಧಾರಕನಾಗುತ್ತಾ, ಲೋಕಕ್ಕೇ ಮಂಗಳ ಕೋರುತ್ತಾರೆ ಭಾಮಾ-ಕೃಷ್ಣರು ಎಂಬಲ್ಲಿಗೆ ಕಥೆ ಮುಗಿಯಿತು. ಹಿಮ್ಮೇಳದಲ್ಲಿ ಹರಿಪ್ರಸಾದ ಕಾರಂತ, ಅರ್ಜುನ ಕೊಡೇಲ್, ಅವಿನಾಶ ಬೈಪಡಿತ್ತಾಯರು ಸಹಕರಿಸಿದರು.

ಸುಂದರ ಐತಾಳ್‌ ಪಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next