ನರಗುಂದ: ಜಾತಿ ಮತ ಪಂಥಗಳನ್ನು ಮೀರಿ ಸರ್ವ ಜನಾಂಗೀಯರಲ್ಲಿ ಭಕ್ತಿಯ ಸೆಲೆ ಹರಿಸಿದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಸಂಗೀತ ದಿಗ್ಗಜರು ಪಂ| ಪುಟ್ಟರಾಜ ಕವಿ ಗವಾಯಿಗಳವರ ಸುಂದರ ಮೂರ್ತಿ ಇದೀಗ ಸಾರ್ವಜನಿಕರನ್ನು ಸೆಳೆಯುತ್ತಿದೆ.
ಪಟ್ಟಣದ ಹೊರವಲಯ ರೋಣ ವೃತ್ತದಲ್ಲಿ ಸ್ಥಾಪಿಸಲಾದ ಪ್ರತಿಮೆ ಸಂರಕ್ಷಣೆ ಜೊತೆಗೆ ಪ್ರವಾಸಿಗರಿಗೆ ಇಲ್ಲಿ ಸೂಕ್ತ ದರ್ಶನ ಭಾಗ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ದಿನಕ್ಕೆ ನೂರಾರು ವಾಹನಗಳ ಓಡಾಟದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಸಿಂಧನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಕೊಣ್ಣೂರು ಕಡೆಗೆ ರೋಣ ವೃತ್ತದಲ್ಲಿ ನಿಂತ ಭಂಗಿಯ ಪುಟ್ಟರಾಜರ ಪ್ರತಿಮೆ ಸ್ಥಾಪಿಸಲಾಗಿದೆ. ಕಣ್ಮನ ಸಳೆಯುವ ಪುಟ್ಟರಾಜರ ದರ್ಶನ ಪಡೆಯಲು ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಕಣ್ತುಂಬಿಕೊಳ್ಳುತ್ತಿದ್ದಾರೆ.
ಸುರಕ್ಷತೆ ಅಗತ್ಯ: ಜನನಿಬಿಡ ಪ್ರದೇಶವಲ್ಲದ ರೋಣ ವೃತ್ತದಲ್ಲಿ ಪುಟ್ಟರಾಜರ ಮೂರ್ತಿ ಸುರಕ್ಷತೆ ಪ್ರಮುಖ. ಸುತ್ತ ಸಸಿಗಳನ್ನು ನೆಟ್ಟಿರುವ ರೈತಪರ, ಕನ್ನಡಪರ ಸಂಘಟನೆಗಳು ಕಳೆದ ವರ್ಷ ರೋಣ ವೃತ್ತಕ್ಕೆ ಪುಟ್ಟರಾಜರ ವೃತ್ತವೆಂದು ನಾಮಕರಣ ಮಾಡಿ ಜು.4ರಂದು ಪುಟ್ಟರಾಜರ ಮೂರ್ತಿ ಸ್ಥಾಪಿಸಿದ್ದಾರೆ.
ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ಅಪಾರ ಭಕ್ತ ಸಮೂಹ ಹೊಂದಿದ ಪುಟ್ಟರಾಜರ ಮೂರ್ತಿ ಸುತ್ತ ರಕ್ಷಣೆ, ಆಸನಗಳನ್ನು ನಿರ್ಮಿಸಿ ಮೂರ್ತಿ ಹೊತ್ತ ಕಟ್ಟೆಯನ್ನು ಸುಂದರಗೊಳಿಸಿ ಸುಣ್ಣ,ಬಣ್ಣದ ಅಲಂಕಾರ ಕಾರ್ಯ ಆಗಬೇಕಿದೆ. ಪ್ರವಾಸಿ ತಾಣ ಚಿಂತನೆ: ಮೂರ್ತಿ ಸ್ಥಾಪಿಸಿದ ಕನ್ನಡಪರ ಸಂಘಟನೆಗಳು ಪುರಸಭೆ ಸಹಕಾರದೊಂದಿಗೆ ಇಲ್ಲಿ ಹೂದೋಟ, ಸುತ್ತ ಗ್ರಿಲ್ನಿಂದ ಸಂರಕ್ಷಣೆ, ಬೆಳಕಿನ ವ್ಯಸವೆ§, ಪ್ರತಿಮೆ ಕಟ್ಟೆಗೆ ಟೈಲ್ಸ್ ಜೋಡಿಸಿ ಈ ಪ್ರದೇಶ ಪ್ರವಾಸಿ ತಾಣವಾಗಿಸುವ ಚಿಂತನೆಯಲ್ಲಿದ್ದಾರೆ. ಇದಕ್ಕೆ ಸಮುದಾಯ ಕೂಡ ಕೈಜೋಡಿಸಿದರೆ ಶೀಘ್ರ ಈ ಕಾರ್ಯ ನೆರವೇರಿಸಲು ಸಾಧ್ಯವಾಗುತ್ತದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದರಿಂದ ಇಲ್ಲಿ ಆಗಮಿಸುವ ಭಕ್ತರಿಗೆ ಮೂರ್ತಿ ದರ್ಶನ ಭಾಗ್ಯ ಕಲ್ಪಿಸುವ ವ್ಯವಸ್ಥೆ ಆಗಬೇಕಿದೆ. ನರಗುಂದ ಪಟ್ಟಣ ಕಡೆಗೆ ಮುಖ ಮಾಡಿ ನಿಂತಿರುವ ಪುಟ್ಟರಾಜರ ಮೂರ್ತಿ ಸ್ಥಾಪನೆ ಈಗಾಗಲೇ ಸಾರ್ವಜನಿಕ ಮನ್ನಣೆಗೆ ಪಾತ್ರವಾಗಿದೆ.
ಸಂರಕ್ಷಣೆ ಕಾರ್ಯ ಶೀಘ್ರ
ಪುಟ್ಟರಾಜರ ಪ್ರತಿಮೆ ಸುತ್ತ ಹೂದೋಟ, ರಕ್ಷಣಾ ಕವಚದೊಂದಿಗೆ ಪ್ರವಾಸಿ ತಾಣವಾಗಿಸುವ ಚಿಂತನೆ ಹೊಂದಿದ್ದೇವೆ.ಪುರಸಭೆ ಸಹಯೋಗದಲ್ಲಿ ಹೂದೋಟ ನಿರ್ಮಿಸುತ್ತೇವೆ. ಈಗಾಗಲೇ ಸಸಿಗಳನ್ನು ನೆಡಲಾಗಿದೆ. ಸಾರ್ವಜನಿಕರ ಸಹಕಾರ ಪಡೆದು ಈ ಪ್ರದೇಶ ಸುಂದರಗೊಳಿಸಲಾಗುವುದು.
•
ಚನ್ನು ನಂದಿ, ರೈತ ಹೋರಾಟ ಒಕ್ಕೂಟ ಅಧ್ಯಕ್ಷ.