Advertisement

ಹೆಸರು ಬಿತ್ತನೆಗೆ ಭರದ ಸಿದ್ಧತೆ

12:49 PM Jun 05, 2019 | Naveen |

ನರಗುಂದ: ತಾಲೂಕಿನ ರೈತಾಪಿ ವರ್ಗ ಕಳೆದ ಐದಾರು ವರ್ಷಗಳಿಂದ ತೀವ್ರ ಬರಗಾಲದಿಂದ ಬೆಂದುಹೋಗಿದ್ದಾರೆ. ಎರಡು ದಿನಗಳ ಹಿಂದೆ ಸುರಿದ ಒಂದಷ್ಟು ಮಳೆಗೆ ಹರ್ಷಗೊಂಡು ಮಳೆರಾಯನ ಭರವಸೆ ಮೇಲೆ ಹೆಸರು ಬೀಜ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದಾರೆ.

Advertisement

ಜೂನ್‌ ಪ್ರಾರಂಭದ ವೇಳೆಗೆ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ರೈತರು ಬಾರದ ವರುಣನ ಕೃಪೆಗೆ ಕಾಯ್ದು ಕುಳಿತಿದ್ದರು. ಒಂದು ವಾರದಿಂದ ನಿತ್ಯ ಮೋಡ ಕವಿದ ವಾತಾವರಣವಿದ್ದರೂ ಮಳೆರಾಯನ ಕೃಪೆಯಿಲ್ಲ. ಎರಡು ದಿನದ ಹಿಂದೆ ಸುರಿದ ಸ್ವಲ್ಪ ಮಳೆಯೇ ರೈತರಿಗೆ ಒಂಚೂರು ಸಮಾಧಾನ ತಂದಂತಾಗಿದೆ. ಹೀಗಾಗಿ ಹೆಚ್ಚು ಖರ್ಚು ಇಲ್ಲದೇ ರೈತನ ಜೇಬು ತುಂಬಿಸುವ ಹೆಸರು ಬೀಜ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ಬೀಜ ದಾಸ್ತಾನು: ನರಗುಂದ ಮತ್ತು ಕೊಣ್ಣೂರು ಹೋಬಳಿ ಸೇರಿ ತಾಲೂಕಿನಲ್ಲಿ ಅಗತ್ಯ ಬೀಜ ದಾಸ್ತಾನು ಕೃಷಿ ಇಲಾಖೆ ಕಾಯ್ದುಕೊಂಡಿದೆ. ಎರಡೂ ಹೋಬಳಿಯಲ್ಲಿ ಸೇರಿ 54 ಕ್ವಿಂಟಾಲ್ ಹೆಸರು ಬೀಜ, 4.5 ಕ್ವಿಂಟಾಲ್ ಜೋಳ ಮತ್ತು 5.5 ಕ್ವಿಂಟಾಲ್ ತೊಗರಿ ಬೀಜ ದಾಸ್ತಾನಿದ್ದು, ಎಲ್ಲ ವರ್ಗದ ರೈತರಿಗೆ ಗರಿಷ್ಠ 5 ಎಕರೆಗೆ 5 ಪ್ಯಾಕೇಟ್ ಬೀಜವನ್ನು ರಿಯಾಯಿತಿ ದರದಲ್ಲಿ ಕೃಷಿ ಕಚೇರಿಯಿಂದ ವಿತರಿಸಲಾಗುತ್ತಿದೆ.

ಬಿತ್ತನೆ ಗುರಿ: ತಾಲೂಕಿನಲ್ಲಿ 8,500 ಹೆಕ್ಟೇರ್‌ ಗೋವಿನಜೋಳ, 7500 ಹೆಕ್ಟೇರ್‌ ಹೆಸರು, 500 ಹೆಕ್ಟೇರ್‌ ಜೋಳ, 1500 ಹೆಕ್ಟೇರ್‌ ಸೂರ್ಯಕಾಂತಿ, 500 ಹೆಕ್ಟೇರ್‌ ಶೇಂಗಾ, 7,000 ಹೆಕ್ಟೇರ್‌ ಹತ್ತಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ಹೊಂದಿದೆೆ. 38 ಕ್ವಿಂಟಾಲ್ ಜೋಳ, 1125 ಕ್ವಿಂಟಾಲ್ ಹೆಸರು, 113 ಕ್ವಿಂಟಾಲ್ ಸೂರ್ಯಕಾಂತಿ, 750 ಕ್ವಿಂಟಾಲ್ ಶೇಂಗಾ, 8 ಕ್ವಿಂಟಾಲ್ ಹತ್ತಿ ಬಿತ್ತನೆ ಬೀಜಕ್ಕೆ ಕೃಷಿ ಕಚೇರಿ ಬೇಡಿಕೆ ಸಲ್ಲಿಸಿದೆ.

ತಾಲೂಕಿನಲ್ಲಿ 50 ಸಾವಿರ ಹೆಕ್ಟೇರ್‌ ಭೌಗೋಳಿಕ ಮತ್ತು 40 ಸಾವಿರ ಹೆಕ್ಟೇರ್‌ ಸಾಗುವಳಿ ಕ್ಷೇತ್ರವಿದೆ. ಮುಂಗಾರು ಹಂಗಾಮಿಗೆ 35 ಸಾವಿರ, ಹಿಂಗಾರಿಗೆ 28 ಸಾವಿರ ಹೆಕ್ಟೇರ್‌ ಕೃಷಿ ಪ್ರದೇಶವಿದೆ. 25 ಸಾವಿರ ಹೆಕ್ಟೇರ್‌ ನೀರಾವರಿ ಕ್ಷೇತ್ರವಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಹೆಸರಿಗೆ ಜೂ. 10 ಕೊನೆದಿನ: ಪ್ರಸಕ್ತ ಮುಂಗಾರಿನಲ್ಲಿ ಜೂ. 10ರೊಳಗೆ ಹೆಸರು ಬಿತ್ತನೆಗೆ ರೈತರು ಮುಂದಾಗಬೇಕು. ಹತ್ತಿ ಬಿತ್ತನೆ ಜೂನ್‌ ಕೊನೆ ವಾರದೊಳಗೆ ಮುಗಿಸಬೇಕು. ಬಿತ್ತನೆ ಪೂರ್ವದಲ್ಲಿ ರೈತರು ಕಡ್ಡಾಯವಾಗಿ ಬೀಜೋಪಚಾರ ಮಾಡುವುದು ಸೂಕ್ತ. ಇದಕ್ಕಾಗಿ ಪ್ರತಿ ಕಿಲೋ ಬಿತ್ತನೆ ಬೀಜಕ್ಕೆ ಶಿಲೀಂದ್ರನಾಶಕ ಟ್ರೈಕೋಡರ್ಮಾ 5 ಗ್ರಾಂ, ಜೀವಾಣು ಗೊಬ್ಬರ ರೈಜೋಬಿಯಂ 1 ಪ್ಯಾಕೇಟ್ ಬೀಜಕ್ಕೆ 250 ಗ್ರಾಂನಿಂದ ಬೀಜೋಪಚಾರ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ರೈತರಿಗೆ ಸಲಹೆ ನೀಡಿದ್ದಾರೆ.

ಉದ್ದು ಬಿತ್ತನೆಗೆ ಮುಂದಾಗಲಿ
ತಾಲೂಕಿನ ರೈತರು ಹತ್ತಿ ಕಾಳು ಊರುವುದಕ್ಕೆ ವಾತಾವರಣದ ಸಾಧಕ ಬಾಧಕ ನೋಡಿಕೊಂಡು ನಿರ್ಧರಿಸಬೇಕು. ಅಲ್ಲದೇ ಉದ್ದು ಬೀಜ ಬಿತ್ತನೆಗೆ ರೈತರು ಮುಂದೆ ಬರಬೇಕು. ನಾವು ಕೂಡ ಉದ್ದು ಬೀಜ ದಾಸ್ತಾನು ಪಡೆಯುವ ಚಿಂತನೆ ನಡೆಸಿದ್ದೇವೆ.
ಚನ್ನಪ್ಪ ಅಂಗಡಿ,
ಸಹಾಯಕ ಕೃಷಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next