Advertisement

ಪಾರಂಪರಿಕ ಕಟ್ಟಡ ರಕ್ಷಿಸಿ: ಡಾ|ಮಳಲಿ

05:21 PM Apr 24, 2019 | Team Udayavani |

ನರಗುಂದ: ಜಗತ್ತಿಗೆ ಸಂಸ್ಕೃತಿಯ ಪರಿಮಳ ಬೀರಿದ ಭಾರತವು ಶಿಲ್ಪಕಲೆಗಳ ತವರೂರು. ಇಲ್ಲಿನ ಪ್ರತಿಯೊಂದು ಶಿಲೆಯೂ ನಮ್ಮ ನಾಡಿನ ಇತಿಹಾಸ ಸಾರುತ್ತವೆ. ಅಂತಹ ಐತಿಹಾಸಿಕ ಪರಂಪರೆ ಸಾರುವ ಸ್ಥಳಗಳು ನಿರ್ಲಕ್ಷ್ಯಕ್ಕೊಳಗಾಗಿ ವಿನಾಶದಂಚಿನಲ್ಲಿರುವುದು ದುರ್ದೈವ ಸಂಗತಿ. ಪಾರಂಪರಿಕ ಕಟ್ಟಡಗಳು, ಐತಿಹಾಸಿಕ‌ ಕುರುಹುಗಳು ಸಾರ್ವಜನಿಕರ ಸೊತ್ತು. ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಾರಂಪರಿಕ ವೈದ್ಯ ಡಾ| ಎಚ್.ಟಿ. ಮಳಲಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಂದಗಿ ಪಟ್ಟಾಧ್ಯಕ್ಷರ ಸ್ಮರಣೋತ್ಸವ ಹಾಗೂ ವಿಶ್ವ ಪಾರಂಪರಿಕ ದಿನಾಚರಣೆ ನಿಮಿತ್ತ ಐತಿಹಾಸಿಕ ತಾಣಗಳ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವಾಲಯಗಳು ಕೇವಲ ಧಾರ್ಮಿಕದ ಪ್ರತೀಕವಲ್ಲ. ದೇಶದ ಸಂಸ್ಕೃತಿ ಮತ್ತು ಆಚಾರ-ವಿಚಾರಗಳ ದ್ಯೋತಕವಾಗಿವೆ. ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ಪ್ರಕಾರ ಸುಮಾರು 35 ಸಾವಿರ ಪುರಾತನ ದೇವಸ್ಥಾನಗಳಿವೆ. ಅಂತಹ ದೇವಸ್ಥಾನಗಳು ಇಂದು ಅಳಿವಿನಂಚಿನಲ್ಲಿ ಇರುವುದು ಕಳವಳಕಾರಿ. ಇತಿಹಾಸ ಬಲ್ಲವರು ಮಾತ್ರ ಇತಿಹಾಸ ನಿರ್ಮಿಸಬಲ್ಲರು. ಹೀಗಾಗಿ ಕೋಶ ಓದಿ ನೋಡು, ದೇಶ ಸುತ್ತಿ ನೋಡು ಎಂಬಂತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ನೈಜತೆ ನೋಡಿದಾಗ ಇತಿಹಾಸದ ಅರಿವು ಬರಲು ಸಾಧ್ಯ ಎಂದರು.

ತುಪ್ಪದ ಕುರಹಟ್ಟಿ ಭೂಸನೂರಮಠದ ಡಾ| ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಇತಿಹಾಸವೆನ್ನುವುದು ಮಾನವ ಜನಾಂಗದ ಸಂಸ್ಕೃತಿ ಕಟ್ಟುವ ಕೆಲಸ ಮಾಡುತ್ತದೆ. ಮಾನವನ ಬದುಕಿಗೆ ಬೆಳಕು ನೀಡುವ ಕಾರ್ಯವನ್ನು ಐತಿಹಾಸಿಕ ತಾಣಗಳು ಮಾಡುತ್ತವೆ. ಇವತ್ತಿನ ಯುವ ಪೀಳಿಗೆಯಲ್ಲಿ ದೂರದರ್ಶನ, ಮೊಬೈಲ್ ಹಾವಳಿಯಿಂದಾಗಿ ದೇಶದ ಸಂಸ್ಕೃತಿ ನಾಶವಾಗುತ್ತಿದೆ. ವಿದ್ಯಾರ್ಥಿಗಳು ಪುರಾತನ ಕಟ್ಟಡಗಳನ್ನು, ಅವಶೇಷಗಳನ್ನು ವೀಕ್ಷಣೆ ಮಾಡಿ ಇತಿಹಾಸ ತಿಳಿದುಕೊಂಡು ದೇಶದ ಸಾಂಸ್ಕೃತಿಕ ಪರಂಪರೆ ರಕ್ಷಿಸುವ ಕೈಂಕರ್ಯ ಮಾಡಬೇಕಿದೆ ಎಂದರು. ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಡಿನ ಐತಿಹಾಸಿಕ ಶ್ರೀಮಂತಿಕೆ, ವೈಭವವನ್ನು ಸಾರುವ ಅನೇಕ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. 1857ರಲ್ಲಿ ಬ್ರಿಟಿಷರ ವಿರುದ್ಧ ಸಂಗ್ರಾಮ ಸಾರಿದ ನರಗುಂದದ ವೀರ ಬಾಬಾಸಾಹೇಬರ ಶೌರ್ಯವನ್ನು ಸಾರುವ ಅರಮನೆ, ಪುರಾತನ ಅವಶೇಷಗಳನ್ನು ಸಂರಕ್ಷಿಸಬೇಕು. ನರಗುಂದದ ಅರಮನೆಯನ್ನು ಐತಿಹಾಸಿಕ ಪ್ರವಾಸಿ ತಾಣವನ್ನಾಗಿಸಿ ನರಗುಂದ ಉತ್ಸವ ಆಚರಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಶಿವಾದ್ವೈತ ಪರಿಭಾಷಾ ವಿಮರ್ಶಾತ್ಮಕ ಅಧ್ಯಯನ ಮಹಾಪ್ರಬಂಧ ಮಂಡಿಸಿ ಮೈಸೂರ ಮಾನಸ ಗಂಗೋತ್ರಿ ವಿವಿಯಿಂದ ಪಿಎಚ್‌ಡಿ ಪದವಿ ಪಡೆದ ಡಾ| ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಬೆಂಗಳೂರಿನ ಭಾರತ ವರ್ಚುವಲ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ| ಎಚ್.ಟಿ. ಮಳಲಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

Advertisement

ಗದುಗಿನ ಲಯ ಕಲಾಮನೆಯ ಶಂಕ್ರಗೌಡ ಪಾಟೀಲ ಇವರು ಸಂಗ್ರಹಿಸಿದ ಪಾರಂಪರಿಕ ಸ್ಥಳಗಳ ಛಾಯಾಚಿತ್ರ ಹಾಗೂ ಲೇಖನಗಳ ಪ್ರದರ್ಶನ ನಡೆಯಿತು. ಪ್ರಭಯ್ಯ ಹಿರೇಮಠ, ರಮೇಶ ಐನಾಪುರ, ಶಿವಬಸಯ್ಯ ಹಿರೇಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next