Advertisement

ನಿರಾಶ್ರಿತರಿಗೆ ಜೋಪಡಿಯೇ ಗತಿ!

06:29 PM Sep 12, 2019 | Naveen |

ಸಿದ್ಧಲಿಂಗಯ್ಯ ಮಣ್ಣೂರಮಠ
ನರಗುಂದ:
ನವಿಲುತೀರ್ಥ ಜಲಾಶಯ ನಿರ್ಮಾಣ ಬಳಿಕ ಮಲಪ್ರಭಾ ನದಿ ಇತಿಹಾಸದಲ್ಲೇ ಕಂಡರಿಯದ ಭೀಕರ ಪ್ರವಾಹ ಈ ಬಾರಿ ಬಂದಿತ್ತು ಇದು ತಾಲೂಕಿನ ಕೊಣ್ಣೂರ ಗ್ರಾಮವನ್ನು ತೀವ್ರವಾಗಿ ಬಾಧಿಸಿದೆ. ಈ ಮಧ್ಯೆ ಗ್ರಾಮದ ನಿರಾಶ್ರಿತ ಕುಟುಂಬಗಳ ಗೋಳು ತೀರದಾಗಿದ್ದು, ಕೆಲ ಕುಟುಂಬಗಳಿಗೆ ಇನ್ನೂ ಜೋಪಡಿಯೇ ಗತಿಯಾಗಿದೆ.

Advertisement

ಕಳೆದ ತಿಂಗಳು ಮಲಪ್ರಭಾ ಪ್ರವಾಹದಿಂದ ಜಲಾವೃತಗೊಂಡ ಕೊಣ್ಣೂರ ಇಡೀ ಗ್ರಾಮದ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಜಲಾವೃತಗೊಂಡ ಪರಿಣಾಮ ಹಳೆ ಕಾಲದ ಸಾಕಷ್ಟು ಮನೆಗಳು ನೆಲಕಚ್ಚಿದ್ದು, ನಿರಾಶ್ರಿತ ಕುಟುಂಬಗಳು ಇನ್ನೂ ಆಶ್ರಯಕ್ಕೆ ಪರದಾಡುವ ಸ್ಥಿತಿಯಿದೆ.

ಜೋಪಡಿಯಲ್ಲೇ ವಾಸ್ತವ್ಯ: ನೆರೆ ಬಂದು ಒಂದು ತಿಂಗಳು ಗತಿಸಿದರೂ 200ಕ್ಕೂ ಹೆಚ್ಚು ನಿರಾಶ್ರಿತ ಕುಟುಂಬಗಳು ಇದುವರೆಗೂ ಅಲ್ಲಿನ ಎಪಿಎಂಸಿ ಪ್ರಾಂಗಣದಲ್ಲೇ ಬೀಡು ಬಿಟ್ಟಿವೆ. ಜಿಲ್ಲಾಡಳಿತ ನಿರ್ಮಿಸಿದ ತಾತ್ಕಾಲಿಕ ಶೆಡ್‌ಗಳು ಕೆಲವು ಕುಟುಂಬಗಳಿಗೆ ಆಶ್ರಯ ನೀಡಿದ್ದರೆ, ಗ್ರಾಮದ ಹರಿಜನ ಜನಾಂಗದ ಸುಮಾರು 50ರಿಂದ 60 ಕುಟುಂಬಗಳು ಇನ್ನೂ ಕಟ್ಟಿಕೊಂಡ ಜೋಪಡಿಯಲ್ಲೇ ಕಷ್ಟಕರ ಜೀವನ ಸಾಗಿಸುತ್ತಿವೆ.

120 ತಾತ್ಕಾಲಿಕ ಶೆಡ್‌: ಈಗಾಗಲೇ ನಿರ್ಮಿಸಿದ 120 ತಾತ್ಕಾಲಿಕ ಶೆಡ್‌ಗಳಲ್ಲಿ ಸಂತ್ರಸ್ತರು ವಾಸ್ತವ್ಯ ಮಾಡುತ್ತಿದ್ದಾರೆ. ಇನ್ನೂ 50, 60 ಕುಟುಂಬಗಳಿಗೆ ತಾತ್ಕಾಲಿಕ ಶೆಡ್‌ ಅವಶ್ಯವಿದ್ದು, ತಾಲೂಕು ಆಡಳಿತ ಗಮನ ಹರಿಸಬೇಕಿದೆ.

ಸೌಲಭ್ಯಗಳು ಬೇಕು: ಕೆಲವು ತಾತ್ಕಾಲಿಕ ಶೆಡ್‌ಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು, ಇನ್ನು ಕೆಲ ಶೆಡ್‌ಗಳಿಗೆ ವೈರಿಂಗ್‌ ಮಾಡಿದ್ದರೂ ವಿದ್ಯುತ್‌ ಸೌಲಭ್ಯ ಒದಗಿಸಿಲ್ಲ. ಈ ಕುಟುಂಬಗಳು ರಾತ್ರಿ ವೇಳೆ ಚಿಮಣಿಗಳನ್ನೇ ಅವಲಂಬಿಸಿದ್ದು, ಪ್ರಾಂಗಣ ಹೊರವಲಯ ಪ್ರದೇಶವಾಗಿದ್ದರಿಂದ ಬೆಳಕಿನ ಸೌಲಭ್ಯ ಕಲ್ಪಿಸಲಿ ಎಂಬುದು ಸಂತ್ರಸ್ತರ ಅಳಲು.

Advertisement

ಜೋಪಡಿಗಳಲ್ಲಿ ವಾಸಿಸುತ್ತಿರುವ ಸುಮಾರು 50, 60 ಕುಟುಂಬಗಳ ಬದುಕು ತೀರಾ ದುಸ್ತರವಾಗಿದೆ. ಬಿಸಿಲು, ಗಾಳಿಯೆನ್ನದೇ ವಿದ್ಯುತ್‌ ಸೌಲಭ್ಯವೂ ಇಲ್ಲದೇ ಈ ಸಂತ್ರಸ್ತರ ಗೋಳು ತೀರದಾಗಿದೆ. ತಾತ್ಕಾಲಿಕ ಶೆಡ್‌ಗಳನ್ನಾದರೂ ನಿರ್ಮಿಸಿಕೊಟ್ಟರೆ ಉಪಕಾರವಾಗುತ್ತದೆ. ಮಕ್ಕಳು ಮರಿ ಕಟ್ಟಿಕೊಂಡು ಎಲ್ಲಿಯತನಕ ಜೋಪಡಿಯಲ್ಲಿ ನಾವು ಬದುಕಬೇಕು ಎಂದು ಭೇಟಿ ನೀಡಿದ್ದ ಸುದ್ದಿಗಾರರೆದುರು ಅವಲತ್ತುಕೊಂಡರು.

ಮೇವಿನ ಕೊರತೆ: ಪ್ರಾಂಗಣದಲ್ಲಿ ವಾಸಿಸುತ್ತಿರುವ ನಿರಾಶ್ರಿತ ಕುಟುಂಬಗಳು ತಮ್ಮ ಜಾನುವಾರುಗಳನ್ನು ಅಲ್ಲೇ ಬಯಲಲ್ಲಿ ಕಟ್ಟಿಕೊಂಡಿದ್ದಾರೆ. ಗೋಶಾಲೆ ನಿರ್ಮಿಸಿದ್ದರೂ ಎಲ್ಲ ಜಾನುವಾರುಗಳಿಗೆ ಅವಕಾಶವಿಲ್ಲ. ಗೋಶಾಲೆಯಲ್ಲೇ ಮೇವಿನ ಕೊರತೆಯಿಂದ ಜಾನುವಾರುಗಳನ್ನು ಪೋಷಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next