Advertisement

ಬೆಳಗಾವಿಯಲ್ಲೇ ಖಾದಿ ಮಹತ್ವ ಸಾರಿದ್ದರು ಗಾಂಧೀಜಿ

04:54 PM Nov 12, 2018 | Team Udayavani |

ನರಗುಂದ: ಗಾಂಧೀಜಿ ಸ್ವದೇಶಿ ವಸ್ತುಗಳನ್ನು ಬಳಸಿ ವಿದೇಶಿ ವಸ್ತುಗಳನ್ನು ನಿರ್ಮೂಲನೆ ಮಾಡಿ ಎಂದು ಪ್ರಥಮ ಬಾರಿಗೆ ಕರೆ ಕೊಟ್ಟು ಖಾದಿ ವಸ್ತ್ರಗಳಿಗೆ ನಾಂದಿ ಹಾಡಿದ್ದು ಕರ್ನಾಟಕದ ಬೆಳಗಾವಿಯಲ್ಲೇ ಎಂಬುದು ಕನ್ನಡಿಗರಾದ ನಾವೆಲ್ಲ ಹೆಮ್ಮೆಪಡುವಂತದ್ದು ಎಂದು ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಹೇಳಿದರು.

Advertisement

ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ತಾಲೂಕಿನ ಚಿಕ್ಕನರಗುಂದ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡೋತ್ಸವ-2018ರ ಉಪನ್ಯಾಸ ಮಾಲೆ-2ರ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಗಾಂಧಿ ಹೆಜ್ಜೆಗಳು ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಏಕೀಕರಣ ಹೋರಾಟಗಾರ ಅಂದಾನಪ್ಪ ದೊಡಮೇಟಿ ಅವರು 1934ರಲ್ಲಿ ಮಹಾತ್ಮಾ ಗಾಂಧೀಜಿ ಅವರನ್ನು ಜಕ್ಕಲಿಗೆ ಕರೆಯಿಸಿ 1200 ಚಕ್ಕಡಿಗಳ ಮೂಲಕ ಇಪ್ಪತ್ತು ಸಾವಿರ ಜನರನ್ನು ಕೂಡಿಸಿ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದರು. ಅವತ್ತಿನ ಕಾಲದಲ್ಲಿ ಗಾಂಧೀಜಿ ಅಸ್ಪೃಶ್ಯತಾ ನಿವಾರಣಾ ಚಳವಳಿಗೆ 1000 ರೂ. ದೇಣಿಗೆ ನೀಡಿ ಚಳವಳಿಗೆ ಪುಷ್ಠಿ ನೀಡಿದ್ದು ಅವಿಸ್ಮರಣೀಯ ಎಂದು ಹೇಳಿದರು. ಬೆಂಗಳೂರಿನ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಗೆ ಭೇಟಿ ನೀಡಿದ ಗಾಂಧೀಜಿ ಸಂದರ್ಶಕರ ಪುಸ್ತಕದಲ್ಲಿ ರೈತ ಎಂದು ಬರೆದುಕೊಂಡದ್ದು ಅವರು ರೈತರ ಮೇಲೆ ಇಟ್ಟಿದ್ದ ಗೌರವ ಎತ್ತಿ ತೋರಿಸುತ್ತದೆ ಎಂದು ಚನ್ನಪ್ಪ ಅಂಗಡಿ ಹೇಳಿದರು. 

ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಗಾಂಧೀಜಿ ರಾಷ್ಟ್ರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಕರ್ನಾಟಕದಲ್ಲಿ ಎಂಬುದು ಹೆಮ್ಮೆಯ ವಿಷಯ. ಅವರು ಸಾವಿರಾರು ವರ್ಷಗಳ ಹಿಂದೆಯೇ ಸಮಾನತೆ ಬೀಜ ಬಿತ್ತಿದ ಕನ್ನಡ ನಾಡಿನ ಬಸವಾದಿ ಶಿವಶರಣರನ್ನು ಹೊಗಳಿದ್ದನ್ನು ಸ್ಮರಿಸಿದರು. ಅವರ ಪ್ರಭಾವದಿಂದ ಹಡೇìಕರ ಮಂಜಪ್ಪ ಅವರು ಪತ್ರಿಕೆ ಮೂಲಕ ಸ್ವಾತಂತ್ರ್ಯ  ಚಳವಳಿ ಜಾಗೃತಿ ಮೂಡಿಸಿ ಕರ್ನಾಟಕದ ಗಾಂಧೀಜಿ ಎಂದು ಪ್ರಸಿದ್ದಿಯಾದವರು. ಹೀಗಾಗಿ ಕರ್ನಾಟಕಕ್ಕೂ ಗಾಂಧೀಜಿ ಅವರಿಗೂ ಅವಿನಾಭಾವ ಸಂಬಂಧವಿತ್ತು ಎಂದು ಹೇಳಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ| ಎಂ.ಪಿ. ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಸಿ. ಕಲಹಾಳ, ಕ.ಸಾ.ಮ.ಸ ವೇದಿಕೆ ಸದಸ್ಯ ಸೋಮು ಹೊಂಗಲ, ಭೀಮಸಿ ಆವಿನ ಇದ್ದರು. ಪ್ರೊ| ಆರ್‌.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬೋಸ್ಲೆ ಸ್ವಾಗತಿಸಿ, ಎಂ.ಡಿ. ಚಲವಾದಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next