Advertisement

Gadag Police: ಹಲವು ಪ್ರಕರಣಗಳ 53 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

05:54 PM Apr 02, 2024 | Team Udayavani |

ಗದಗ: ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆಯು ವಿಶೇಷ ಕಾರ್ಯಾಚರಣೆ ನಡೆಸಿ ಜಿಲ್ಲಾದ್ಯಂತ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 19 ಪ್ರಕರಣಗಳಲ್ಲಿ 53 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Advertisement

ಗದಗ ಉಪವಿಭಾಗ ವ್ಯಾಪ್ತಿಯ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ 6, ಬೆಟಗೇರಿ ಬಡಾವಣೆ ಠಾಣೆಯ 3 ಹಾಗೂ ಗದಗ ಶಹರ ಪೊಲೀಸ್ ಠಾಣೆಯ 1 ಸೇರಿ ಒಟ್ಟು10 ಸ್ವತ್ತಿನ ಪ್ರಕರಣಗಳಲ್ಲಿ ಕಳ್ಳತನವಾದ 31.25 ಲಕ್ಷ ರೂ. ಮೌಲ್ಯದ 625 ಗ್ರಾಂ ತೂಕದ ಬಂಗಾರದ ಆಭರಣಗಳು, 3 ಲಕ್ಷ ರೂ. ಮೌಲ್ಯದ 5,094 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ನರಗುಂದ ಉಪವಿಭಾಗದ ಗಜೇಂದ್ರಗಡ ಠಾಣೆಯ 1, ನರೇಗಲ್ ಠಾಣೆಯ 2, ಮುಂಡರಗಿ ಠಾಣೆಯ 4 ಹಾಗೂ ನರಗುಂದ ಪೊಲೀಸ್ ಠಾಣೆಯ 1 ಸೇರಿ ಒಟ್ಟು 8 ಪ್ರಕರಣಗಳಲ್ಲಿ 18.75 ಲಕ್ಷ ರೂ. ಮೌಲ್ಯದ 336 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ 80 ಸಾವಿರ ಮೌಲ್ಯದ 2 ಬೈಕ್ ಗಲಕನ್ನು ವಶಕ್ಕೆ ಪಡೆಯಲಾಗಿದೆ.

ಜೊತೆಗೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪೊಲೀಸ್ ಠಾಣೆಯ ವ್ಯಾಪ್ತಿಯ ಕಳ್ಳತನ ಪ್ರಕರಣವನ್ನು ಜಿಲ್ಲೆಯ ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟಾರೆ 19 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 6 ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತನ ಅಂಬೇಡ್ಕರ್ ನಗರದ ಅಮರ ವಸಂತ ಚವ್ಹಾಣ, ಬಳ್ಳಾರಿ ಜಿಲ್ಲೆ ಕಂಪ್ಲಿಯ ರಾಮು ಬಸಪ್ಪ ಶಿಕಾರಿ, ರಾಜು ಗುಜ್ಜಪ್ಪ ವಡ್ಡರ, ಬೆಂಗಳೂರಿನ ಹನುಮಂತಪ್ಪ ಈಶ್ವರಪ್ಪ ಶೇಖರಸಿಂಗ್, ಶಿವಮೊಗ್ಗದ ಶಂಕರ ಚನ್ನಪ್ಪ ವಾಲ್ಮೀಕಿ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ಜಿಲಾನಿ ರಾಜೇಸಾಬ್ ಜಾತಗೇರ ಅವರನ್ನು ವಶಕ್ಕೆ ಪಡೆಯಲಾಗಿದೆ.

Advertisement

ಪ್ರಕರಣಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next