Advertisement

ಸಾಲ ಮರುಪಾವತಿಗೆ ಒತ್ತಾಯಿಸಿದರೆ ಹೋರಾಟ

04:49 PM Jan 23, 2020 | Team Udayavani |

ನರಗುಂದ: ಐದಾರು ವರ್ಷದಿಂದ ಸಕಾಲಕ್ಕೆ ಮಳೆ ಬೆಳೆ ಬಾರದೇ ತಾಲೂಕಿನ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ವರ್ಷದಲ್ಲಿ ಒಂದು ಹಂಗಾಮಿನ ಬೆಳೆಗೂ ಸಮರ್ಪಕ ಕಾಲುವೆ ನೀರು ದೊರಕಿಲ್ಲ. ಇಂತಹ ಸಂದರ್ಭದಲ್ಲಿ ರೈತರ ಸಾಲ ಮರುಪಾವತಿಗೆ ಒತ್ತಾಯಿಸಿದರೆ ರೈತ ಬಂಡಾಯ ಮಾದರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕಳಸಾ-ಬಂಡೂರಿ ಹೋರಾಟ ಕೇಂದ್ರ ಸಮಿತಿ ಹಾಗೂ ಕನ್ನಡ ರಕ್ಷಣಾ ಸೇನೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Advertisement

ಬುಧವಾರ ಎರಡೂ ಸಂಘಟನೆಗಳ ಆಶ್ರಯದಲ್ಲಿ ತಹಶೀಲ್ದಾರ್‌ ಎ.ಎಚ್‌. ಮಹೇಂದ್ರ ಅವರಿಗೆ ಮನವಿ ಸಲ್ಲಿಸಲಾಗಿದೆ. ಮಲಪ್ರಭಾ ಕಾಲುವೆಯಿಂದ ವರ್ಷಕ್ಕೆ ಒಂದು ಹಂಗಾಮಿನ ಬೆಳೆಗೂ ಸಮರ್ಪಕ ನೀರು ಒದಗಿಸಿಲ್ಲ. ಮಲಪ್ರಭಾ ಕಾಲುವೆಯಿಂದ ನೀರು ಕೊಡದೇ
ಇರುವುದರಿಂದ ರೈತರು ಬೆಳೆಸಾಲ ಮರುಪಾವತಿ ಮಾಡಲು ಆಗುವುದಿಲ್ಲ ಎಂದು ಮನವಿಯಲ್ಲಿ ಹೇಳಿದ್ದಾರೆ.

ಬ್ಯಾಂಕಿನವರು ರೈತರ ಮನೆಗೆ ಬಂದು ಜಪ್ತಿ ಮಾಡುವ ಹಾಗೂ ನ್ಯಾಯಾಲಯ ಮೊರೆ ಹೋಗುವ ಹುನ್ನಾರ ನಡೆಸಿದ್ದಾರೆ. ನವಿಲುತೀರ್ಥ ಜಲಾಶಯ ನಿರ್ಮಿಸಿ ದಶಕಗಳು ಉರುಳಿದರೂ ಇದುವರೆಗೆ ಕಾಲುವೆಯಿಂದ ಸಮರ್ಪಕ ನೀರು ಒದಗಿಸಿಲ್ಲ. ಮೇಲಾಗಿ ತಾಲೂಕಿನ ರೈತರಿಗೆ ಯಾವ ಸವಲತ್ತುಗಳೂ ದೊರಕಿಲ್ಲ. ಪ್ರತಿವರ್ಷ ರೈತರ ಜಮೀನಿಗೆ ಎಷ್ಟು ನೀರು ಒದಗಿಸಲಾಗಿದೆ ಎಂಬುದರ ಕುರಿತು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕು ಎಂದು
ತಹಶೀಲ್ದಾರ್‌ಗೆ ಒತ್ತಾಯಿಸಿದ್ದಾರೆ.

ರೈತರಿಗೆ ಬೆಳೆಸಾಲ ತುಂಬುವ ಶಕ್ತಿಯಿಲ್ಲ. ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿ ರೈತರಿಗೆ ನೆರವಾಗಬೇಕು. ಇಲ್ಲವಾದಲ್ಲಿ 1980ರ ಬೆಟರ್‌ವೆುಂಟ್‌ ಲೆವಿ ರದ್ದು ಮಾಡುವ ರೈತ ಬಂಡಾಯದ ಮಾದರಿ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಕಳಸಾ-ಬಂಡೂರಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಜಲಾಶಯ ನಿರ್ಮಾಣದಿಂದಲೂ ಮಲಪ್ರಭಾ ಕಾಲುವೆಯಿಂದ ಒಂದು ಹಂಗಾಮಿಗೂ ಸಮರ್ಪಕ ನೀರು ಒದಗಿಸಿಲ್ಲ. ರೈತರು ಬೆಳೆಸಾಲ ಕಟ್ಟುವುದಾದರೂ ಹೇಗೆ. ಸರ್ಕಾರ ಕೂಡಲೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಕನ್ನಡ ರಕ್ಷಣಾ ಸೇನೆ ಉತ್ತರ ಕರ್ನಾಟಕ ಘಟಕ ಅಧ್ಯಕ್ಷ ಸಿದ್ದನಗೌಡ ಮರಿಗೌಡ್ರ, ವೀರೇಶ ನವಲಗುಂದ, ಮುತ್ತಪ್ಪ ತೋರಗಲ್ಲ, ಎಸ್‌.ಜಿ. ಕಾಡದೇವರಮಠ, ಆರ್‌.ಬಿ. ರಾಚನಗೌಡ್ರ, ಚನ್ನಬಸಪ್ಪ ನಂದಿ, ಆರ್‌.ಎಸ್‌. ಸುಂಕದ, ಎಸ್‌.ಕೆ. ಕಳಸನ್ನವರ, ದಿಲೀಪ ಸುಬೇದಾರ,
ಬಾಪುಗೌಡ ಹೂಲಗೇರಿ, ಮಲ್ಲನಗೌಡ ಯಲ್ಲಪ್ಪಗೌಡ್ರ, ಬಸನಗೌಡ ಯಲ್ಲಪ್ಪಗೌಡ್ರ, ಮಲ್ಲಪ್ಪ ಕರಿಯಪ್ಪನವರ, ಲಕ್ಷ್ಮಣ ಬಡಕಪ್ಪನವರ, ಸಂಗಪ್ಪ ಚಿನಿವಾಲರ, ಕಲ್ಲನಗೌಡ ಬಸನಗೌಡ್ರ, ನಬೀಸಾಬ್‌ ಮಿಯಾಕಾನವರ, ಮಕ್ತುಂಸಾಬ್‌ ನದಾಫ್‌, ನಿಂಗಪ್ಪ ದಿವಟರ, ಅಪ್ಪಣ್ಣ ನಾಯ್ಕರ, ಆರ್‌.ಪಿ. ಚಂದೂನವರ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next