ರಾಯಚೂರು: ರೈತರ ಐತಿಹಾಸಿಕ ಹೋರಾಟದ ಕಥಾಹಂದರವುಳ್ಳ “ನರಗುಂದ ಬಂಡಾಯ’ ಸಿನಿಮಾ ಮಾ.4ರಂದು ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಬಿಡುಗಡೆ ಮಾಡಲಾಗುವುದು ಎಂದು ಸಿನಿಮಾ ನಿರ್ಮಾಪಕ ಸಿದ್ಧೇಶ್ವರ ವಿರಕ್ತಮಠ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1980ರ ಜು.21ರಂದು ನಡೆದ ಘಟನೆ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದ ರೈತರ ಮೇಲೆ ನಡೆದ ಗುಂಡಿನ ದಾಳಿ, ರೈತರ ಪ್ರತಿರೋಧ, ಮಲಪ್ರಭಾ ಅಣೆಕಟ್ಟಿನ ವಿಚಾರವಾಗಿ ರೈತರು ಮತ್ತು ಸರ್ಕಾರದ ನಡುವೆ ನಡೆದ ಸಂಘರ್ಷ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ವಿವರಿಸಿದರು.
ರಾಯಚೂರಿನ ಎರಡು ಚಿತ್ರಮಂದಿರ ಸೇರಿ ಉತ್ತರ ಕರ್ನಾಟಕ ಭಾಗದ ಎಲ್ಲ ಚಿತ್ರ ಮಂದಿರಗಳಲ್ಲೂ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ನಟ ವೇದಾಂತ್ ನಾಯಕನಾಗಿ ನಟಿಸಿದ್ದು, ನಟಿ ಶುಭ ಪೂಂಜಾ ನಾಯಕಿನಟಿಯಾಗಿದ್ದಾರೆ. ಹಾಸ್ಯನಟ ಸಾಧುಕೋಕಿಲ, ಅವಿನಾಶ, ಭವ್ಯ, ರವಿಚೇತನ್, ಶಿವಕುಮಾರ್, ಸುರೇಶ ರಾಜ್ ಸೇರಿ ಅನೇಕರು ಚಿತ್ರದಲ್ಲಿದ್ದಾರೆ. ಕೇಶವಾದಿತ್ಯ ಸಾಹಿತ್ಯ ಮತ್ತು ಸಂಭಾಷಣೆ ಮಾಡಿದ್ದು, ಯಶೋವರ್ಧನ್ ಸಂಗೀತ ನೀಡಿದ್ದಾರೆ ಎಂದು ವಿವರಿಸಿದರು.
ಈ ಭಾಗದಲ್ಲೇ ಹೆಚ್ಚು ಚಿತ್ರೀಕರಣ ಮಾಡಲಾಗಿದೆ. ಕೋವಿಡ್ ಕಾರಣಕ್ಕೆ ಸಿನಿಮಾ ಬಿಡುಗಡೆ ಅಡೆತಡೆಯಾಗಿತ್ತು. ರೈತರಿಗೆ ಸಂಬಂಧಿಸಿದ ಸಿನಿಮಾವಾಗಿದ್ದು, ಈ ಭಾಗದ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ಗೋಷ್ಠಿಯಲ್ಲಿ ಶರಣಪ್ಪ ಗೋನಾಳ, ಸಾಯಿಕುಮಾರ್ ಆದೋನಿ, ಸಾದಿಕ್ ಇದ್ದರು. ಬಳಿಕ ಕಚೇರಿ ಆವಣದಲ್ಲಿ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ನಗರ ಶಾಸಕ ಡಾ| ಶಿವರಾಜ್ ಪಾಟಿಲ್, ಈ ಭಾಗದ ನಿರ್ಮಾಪಕರು ಬಹಳ ಕಷ್ಟಪಟ್ಟು ಒಳ್ಳೆಯ ಸಿನಿಮಾ ನಿರ್ಮಾಣ ಮಾಡಿದ್ದಾರೆ. “ನರಗುಂದ ಬಂಡಾಯ’ ಎನ್ನುವುದು ಚರಿತ್ರೆಯಲ್ಲಿ ಉಳಿದ ಅಧ್ಯಾಯವಾಗಿದೆ. ಅದನ್ನು ಎಲ್ಲರಿಗೂ ತಲುಪಿಸುವ ಕೆಲಸ ಈ ಸಿನಿಮಾದಿಂದ ಆಗುತ್ತಿರುವುದು ಶ್ಲಾಘನೀಯ. ಸಿನಿಮಾ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.