Advertisement

ನರಾಡಿಗೆ ಸಾರ್ವಜನಿಕ ಸಮ್ಮಾನ

06:00 AM Dec 21, 2018 | |

ಬಡಗುತಿಟ್ಟು ಯಕ್ಷಗಾನದಲ್ಲಿ 40ಕ್ಕೂ ಅಧಿಕ ವರ್ಷಗಳ ಕಲಾಸೇವೆ ಮಾಡಿ 20 ವರ್ಷಗಳಿಂದ ಮಂದಾರ್ತಿ ಮೇಳದ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ನಡುತಿಟ್ಟಿನ ಪ್ರಾತಿನಿಧಿಕ ಕಲಾವಿದ ನರಾಡಿ ಭೋಜರಾಜ ಶೆಟ್ಟರಿಗೆ ಅರುವತ್ತರ ಹರೆಯ.ಅವರ ಅರವತ್ತರ ಅಭಿನಂದನೆ ಮತ್ತು ಸಾರ್ವಜನಿಕ ಸಮ್ಮಾನ ಮತ್ತು ನಿಧಿ ಅರ್ಪಣೆಯ ಕಾರ್ಯಕ್ರಮ ಅವರ ಅಭಿಮಾನಿಗಳು ಮತ್ತು ಶ್ರೀ ಮಂದಾರ್ತಿ ಮೇಳದ ಅಭಿಮಾನಿಗಳ ವತಿಯಿಂದ ಡಿ.22ರಂದು ಮಂದಾರ್ತಿ ಕ್ಷೇತ್ರದಲ್ಲಿ ನೆರವೇರಲಿದೆ. ಬಳಿಕ ಕೃಷ್ಣಾರ್ಜುನ ಯಕ್ಷಗಾನ ಪ್ರದರ್ಶನವಿದೆ. 

Advertisement

ನರಾಡಿ ಭೋಜರಾಜ ಶೆಟ್ಟರು ಯಕ್ಷಗಾನದಲ್ಲಿ ಆಸಕ್ತಿ ಕುದುರಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯನಾಗಿ ಸೇರಿಕೊಂಡು ಹೆಜ್ಜೆಗಾರಿಕೆ ಕಲಿತರು.ಉಪ್ಪೂರರ ಪ್ರೇರಣೆಯಂತೆ 16ನೇ ವಯಸ್ಸಿನಲ್ಲಿ ಅಮೃತೇಶ್ವರಿ ಮೇಳದಲ್ಲಿ ಗೆಜ್ಜೆಕಟ್ಟಿದರು.ಶಿರಿಯಾರ ಮಂಜು ನಾಯ್ಕರ ಹೂವಿನಕೋಲಿನಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಳ್ಳುತಿದ್ದ ಇವರು ಮಂಜು ನಾಯ್ಕರು ಮತ್ತು ಕೋಟ ವೈಕುಂಠನವರಲ್ಲಿ ಮಾತುಗಾರಿಕೆ ಕಲಿತು,ಸಾಲಿಗ್ರಾಮ ಮೇಳದ ಪುಂಡು ವೇಷದಾರಿಯಾಗಿ ಕಾಣಿಸಿಕೊಂಡರು.ಬಳಿಕ ಶಿರಸಿ,ಪೆರ್ಡೂರು,ಕಮಲಶಿಲೆ,ಸೌಕೂರು,ಮಾರಣಕಟ್ಟೆ ಮೇಳಗಳಲ್ಲಿ ಪುರುಷ ವೇಷದಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಮೃತೇಶ್ವರಿ ಮೇಳದ ಸಂಚಾಲಕರಾಗಿ ಯಜಮಾನಿಕೆಯ ಸಿಹಿಕಹಿಯನ್ನೂ ಉಂಡವರು. ಎರಡನೇ ವೇಷ ಹಾಗೂ ಪುರುಷ ವೇಷಗಳಿಗೆ ಸಮಾನ ನ್ಯಾಯ ಒದಗಿಸಬಲ್ಲ ಇವರ ಕರ್ಣ, ಅರ್ಜುನ, ಭೀಷ್ಮ ಪರಶುರಾಮ, ವೀರಮಣಿ , ಪುಷ್ಕಳ, ದಶರಥ, ಮಾರ್ತಾಂಡತೇಜ ಜಾಂಬವ, ಕೌರವ,ರಾವಣ, ಹಿರಣ್ಯಕಶ್ಯಪು, ಕಂಸ, ಕಾಲನೇಮಿ,ಶುಂಬಾಸುರ, ಸುದನ್ವ, ತಾಮ್ರದ್ವಜ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. 

ಸುಂದರವಾದ ಆಳಂಗ,ನೀಳಕಾಯ,ವಿಶಿಷ್ಟವಾದ ಶ್ರುತಿಬದ್ಧತೆ, ಹಿತಮಿತವಾದ ಕುಣಿತ,ಪ್ರತ್ಯುತ್ಪನ್ನ ಮತಿತ್ವ, ಸಮರ್ಥವಾದ ಪದ್ಯದ ಎತ್ತುಗಡೆಯಿಂದ ಬಡಗಿನ ಹಿರಿಯ ಕಲಾವಿದರಾದ ಐರೋಡಿ ಗೋವಿಂದಪ್ಪ ಮತ್ತು ನಗರ ಜಗನ್ನಾಥ ಶೆಟ್ಟಿಯವರ ಉತ್ತರಾಧಿಕಾರಿಯಾಗಿ ಇವರನ್ನು ಗುರುತಿಸಬಹುದಾಗಿದೆ.ಮಾತುಗಾರಿಕೆಯಲ್ಲಿ ಯಕ್ಷಗಾನದ ಆವರಣ ಭಂಗಮಾಡದ ಬದ್ಧತೆ ಅವರದ್ದು. ಉತ್ತಮ ನಾಟ್ಯಪಟುವೆಂದು ಗುರುತಿಸಿಕೊಳ್ಳದಿದ್ದರೂ ಜಾಪಿನ ಮತ್ತು ತೂಕದ ಹೆಜ್ಜೆಗಾರಿಕೆ, ಕಟ್ಟುಮೀಸೆಯ ಹಾರಾಡಿ ಶೈಲಿ,ರಂಗಸ್ಥಳವನ್ನು ತುಂಬುವ ಅವರ ದೊಡ್ಡ ಗಾತ್ರದ ವೇಷ, ಪಾತ್ರಕ್ಕೆ ತಕ್ಕಷ್ಟು ಮಾತುಗಾರಿಕೆ ಅವರ ಹೆಚ್ಚುಗಾರಿಕೆ. 

– ಪ್ರೊ|ಎಸ್‌.ವಿ.ಉದಯ ಕುಮಾರ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next