ಕೋಲ್ಕತಾ: ಪ್ರಮುಖ ಬೆಳವಣಿಗೆಯಲ್ಲಿ ನಾರದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲ್ಪಟ್ಟ ಟಿಎಂಸಿಯ ನಾಲ್ವರು ಮುಖಂಡರನ್ನು ಜೈಲುವಾಸದ ಬದಲು ಗೃಹಬಂಧನದಲ್ಲಿ ಇರಿಸುವಂತೆ ಕೋಲ್ಕತಾ ಹೈಕೋರ್ಟ್ ಶುಕ್ರವಾರ(ಮೇ 21) ಆದೇಶ ನೀಡಿದೆ.
ಇದನ್ನೂ ಓದಿ:10 ಆಕ್ಸಿಜನ್ ಸಿಲಿಂಡರ್ ಗಳನ್ನು ಕೊಡುಗೆಯಾಗಿ ನೀಡಿದ ಶಾಸಕ ಮಂಜುನಾಥ್ ಮತ್ತು ಸ್ನೇಹಜೀವಿ ಬಳಗ
ನಾರದ ಸ್ಟಿಂಗ್ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್, ವಿಸ್ತೃತಪೀಠಕ್ಕೆ ವರ್ಗಾಯಿಸಿದೆ. ಕೋಲ್ಕತಾ ಹೈಕೋರ್ಟ್ ನೀಡಿರುವ ಈ ತೀರ್ಪು ಇತ್ತೀಚೆಗೆ ಸುಪ್ರೀಂಕೋರ್ಟ್ ಗೌತಮ್ ನವ್ಲಾಖಾ ಪ್ರಕರಣದ ಆದೇಶದಂತೆ ಇದ್ದಿರುವುದಾಗಿ ವರದಿ ಹೇಳಿದೆ.
ನಾರದ ಸ್ಟಿಂಗ್ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಹೈಕೋರ್ಟ್ ಆದೇಶದಂತೆ ತೃಣಮೂಲ ಕಾಂಗ್ರೆಸ್ ಮುಖಂಡರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರ, ಮಾಜಿ ಮೇಯರ್ ಸೋವನ್ ಚಟರ್ಜಿಯನ್ನು ಬಂಧಿಸಿದ್ದರು.
2014ರಲ್ಲಿ ನಾರದ ನ್ಯೂಸ್ ನ ಪತ್ರಕರ್ತ ಮ್ಯಾಥ್ಯೂ ಸಾಮ್ಯುಯೆಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಟಿಎಂಸಿಯ ಸಚಿವರುಗಳು, ಸಂಸದರು ಮತ್ತು ಶಾಸಕರು ಲಂಚಸ್ವೀಕರಿಸಿರುವುದು ದಾಖಲಾಗಿದ್ದು, ನಂತರ ಅದು ಪೋರ್ಟಲ್ ನಲ್ಲಿ ಪ್ರಕಟವಾಗುವ ಮೂಲಕ ಬಹಿರಂಗಗೊಂಡಿತ್ತು.